ಉಪ್ಪಿನಂಗಡಿ: ಕೊರೋನ ಸೋಂಕಿಗೆ ಮಹಿಳೆ ಬಲಿ

Update: 2021-04-25 13:59 GMT

ಉಪ್ಪಿನಂಗಡಿ: ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರಿಗೆ ಕೋವಿಡ್ -19 ಪಾಸಿಟಿವ್ ಬಂದಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಅವರು ರವಿವಾರ ನಿಧನರಾಗಿದ್ದಾರೆ.

34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ನಿವಾಸಿ ಮೃತ ಮಹಿಳೆ. ಉಬ್ಬಸ ಹಾಗೂ ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಮಧ್ಯಾಹ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಬೆಳಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಕೋವಿಡ್ -19 ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರ ಪುತ್ರ, ಕಳೆದ ಆರು ವರ್ಷಗಳಿಂದ ತನ್ನ ತಾಯಿಗೆ ಉಬ್ಬಸ ಕಾಯಿಲೆ ಇದೆ. ಸ್ಥಳೀಯ ಆಸ್ಪತ್ರೆಯಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಕೂಡಾ ಅವರಿಗೆ ದಮ್ಮು ಕಟ್ಟುವುದು ಜಾಸ್ತಿಯಾಗಿದ್ದು, ಅದರೊಂದಿಗೆ ಕಫದ ಸಮಸ್ಯೆಯೂ ಇತ್ತು. ಅದಕ್ಕೆ ನಾವು ಅವರನ್ನು ನಿನ್ನೆ ಮಧ್ಯಾಹ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಇವರನ್ನು ಪರೀಕ್ಷಿಸಿದ ವೈದ್ಯರು ನಾಲ್ಕೈದು ದಿನ ಐಸಿಯೂನಲ್ಲಿ ಚಿಕಿತ್ಸೆ ಪಡೆಯಬೇಕು. ಮತ್ತೆ ಅವರು ಗುಣವಾಗುತ್ತಾರೆ ಎಂದು ತಿಳಿಸಿದ್ದರು. ನಿನ್ನೆ ರಾತ್ರಿ 9 ಗಂಟೆಗೆ ಅವರಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಆಗ ಕೋವಿಡ್ ಪಾಸಿಟಿವ್ ಬಂದಿತ್ತು. ರವಿವಾರ ಬೆಳಗ್ಗೆ ವೈದ್ಯರು ಅವರು ಮೃತಪಟ್ಟಿ ದ್ದಾರೆ ಎಂದು ತಿಳಿಸಿದರು ಎಂದು ಹೇಳಿದರಲ್ಲದೆ, ತಾಯಿ ಕೆಲವೊಮ್ಮೆ ಆಸ್ಪತ್ರೆಗೆ ಹೋಗುತ್ತಿದ್ದದ್ದು ಬಿಟ್ಟರೆ ಬೇರೆಲ್ಲಿಗೂ ಹೋಗುತ್ತಿರಲಿಲ್ಲ. ಮನೆಯಲ್ಲೇ ಇದ್ದರು. ಅವರಿಗೆ ದಮ್ಮು ಕಟ್ಟುವುದು ಬಿಟ್ಟರೆ ಜ್ವರ ಅಂತಹ ಲಕ್ಷಣಗಳು ನಿನ್ನೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಮೃತರು ಪತಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News