×
Ad

ಪೆರ್ಮುದೆಯಲ್ಲಿ ಅಗ್ನಿ ಅನಾಹುತ ಪ್ರಕರಣ: ಸುಗಂಧ ದ್ರವ್ಯ ಫ್ಯಾಕ್ಟರಿಯ ರಾಸಾಯನಿಕ ಪದಾರ್ಥಗಳ ಸ್ಥಳಾಂತರ

Update: 2021-04-25 20:04 IST

ಮಂಗಳೂರು, ಎ.25: ಮಂಗಳೂರು ಎಸ್‌ಇಝಡ್ ಕಾರಿಡಾರಿನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅನಾಹುತದಿಂದ ಹಾನಿಗೊಳಗಾಗಿರುವ ‘ಕ್ಯಾಟಸಿಂತ್’ ಸುಗಂಧ ದ್ರವ್ಯ ಫ್ಯಾಕ್ಟರಿಯಲ್ಲಿ ಅಳಿದುಳಿದ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ರವಿವಾರ ಭರದಿಂದ ಸಾಗಿತು.

ಮಂಗಳೂರಿನ ಅಗ್ನಿಶಾಮಕದಳ ಹಾಗೂ ಎಸ್‌ಇಝಡ್‌ನ ಅಗ್ನಿಶಾಮಕ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳಾಂತರಿಸಲಾಯಿತು. ಅಗ್ನಿ ಅನಾಹುತದಿಂದ ಘಟಕದ ಕೆಲವೆಡೆ ವಾಲ್ವ್‌ಗಳಲ್ಲಿ ರಾಸಾಯನಿಕ ಪದಾರ್ಥಗಳ ಸೋರಿಕೆ ರಾತ್ರಿಯಿಡೀ ಆಗುತ್ತಲೇ ಇತ್ತು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಟಾಲ್ವಿನ್, ಫಾರ್ಮಲ್ ಡಿಹೈಡ್ರೆಡ್, ಎಚ್‌ಸಿಎಲ್ ಮುಂತಾದ ರಾಸಾಯನಿಕ ಪದಾರ್ಥಗಳನ್ನು ಸಂಗ್ರಹಿಸಿಡಲಾಗಿತ್ತು. ಅವುಗಳನ್ನು ಬೇರೆ ಟ್ಯಾಂಕರ್‌ಗೆ ಸ್ಥಳಾಂತರಿಸಲಾಗಿದೆ.

ಕ್ಯಾಟಸಿಂತ್ ಫ್ಯಾಕ್ಟರಿಯಲ್ಲಿ ನಾಲ್ಕು ಘಟಕಗಳಿವೆ. ಆ ಪೈಕಿ ಒಂದರಲ್ಲಿ ಮಾತ್ರವೇ ಕೆಲಸ ನಡೆಯುತ್ತಿತ್ತು, ಉಳಿದವುಗಳಲ್ಲಿ ಉತ್ಪಾದನೆ ಆರಂಭಗೊಂಡಿರಲಿಲ್ಲ. ಶನಿವಾರ ಸಂಭವಿಸಿದ ಅಗ್ನಿ ಅನಾಹುತವು ಪರಿಸರದಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು. ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸಲಾಗಿತ್ತು.

ಸ್ಥಾವರದ ಅನೇಕ ಯಂತ್ರೋಪಕರಣ, ಪೈಪ್‌ಲೈನ್‌ಗೆ ಸ್ವಲ್ಪ ಹಾನಿಯಾಗಿದೆ. ಆದರೆ ಈವರೆಗೆ ನಷ್ಟದ ಅಂದಾಜು ಮಾಡಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಬೆಂಕಿ ಅನಾಹುತದ ಬಗ್ಗೆ ಬಜ್ಪೆ ಠಾಣೆಗೆ ಇನ್ನೂ ಯಾವುದೇ ದೂರು ಬಂದಿಲ್ಲ ಎಂದು ಮಂಗಳೂರು ಉತ್ತರ ವಲಯ ಎಸಿಪಿ ಎಸ್.ಮಹೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News