×
Ad

ದ.ಕ.ಜಿಲ್ಲೆಯಲ್ಲಿ ಸೋಮವಾರದಿಂದ ಖಾಸಗಿ ಸಿಟಿ, ಸರ್ವಿಸ್ ಬಸ್ ಸಂಚಾರ: ದಿಲ್‌ರಾಜ್ ಆಳ್ವ

Update: 2021-04-25 20:38 IST
ಸಾಂದರ್ಭಿಕ ಚಿತ್ರ

ಮಂಗಳೂರು, ಎ.25: ಕೋರೋನ 2ನೆ ಅಲೆಯನ್ನು ನಿಗ್ರಹಿಸುವ ಸಲುವಾಗಿ ವೀಕೆಂಡ್ ಕರ್ಫ್ಯೂ ವಿಧಿಸಿದ ಮೇರೆಗೆ ದ.ಕ.ಜಿಲ್ಲೆಯಲ್ಲಿ ಶನಿವಾರ ಮತ್ತು ರವಿವಾರ ಸ್ಥಗಿತಗೊಂಡಿದ್ದ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್‌ಗಳು ಸೋಮವಾರದಿಂದ ಎಂದಿನಂತೆ ಸಂಚರಿಸಲಿವೆ ಎಂದು ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳ ಒಡಾಡಕ್ಕೆ ನಿರ್ಬಂಧವಿಲ್ಲದಿದ್ದರೂ ಕೂಡ ಈ ಎರಡೂ ದಿನದಲ್ಲಿ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿತ್ತು. ಆದರೆ ಪ್ರಯಾಣಿಕರಿಲ್ಲದ ಕಾರಣ ಬಸ್ ಸಂಚಾರವನ್ನು ಬಳಿಕ ಸ್ಥಗಿತಗೊಳಿಸಲಾಗಿತ್ತು.

ಎ.26ರ ಸೋಮವಾರ ಮುಂಜಾನೆ 6 ಗಂಟೆಗೆ ವೀಕೆಂಡ್ ಕರ್ಫ್ಯೂ ಅವಧಿ ಕೊನೆಗೊಳ್ಳಲಿದೆ. ಆ ಬಳಿಕ ಅಂದರೆ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಬಸ್, ರಿಕ್ಷಾ ಮತ್ತಿತರ ವಾಹನಗಳ ಓಡಾಟ, ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೆ ಸದ್ಯದ ಮಾರ್ಗಸೂಚಿಯ ಪ್ರಕಾರ ಅವಕಾಶವಿದೆ. ಉಳಿದಂತೆ ಶಾಲಾ ಕಾಲೇಜುಗಳು, ಧಾರ್ಮಿಕ ಕೇಂದ್ರಗಳು, ಸಿನೆಮಾ ಮಂದಿರಗಳು, ಈಜುಕೊಳ ಇತ್ಯಾದಿಗಳನ್ನು ತೆರೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಕೆಎಸ್ಸಾರ್ಟಿಸಿ ಬಸ್‌ಗಳ ಓಡಾಟಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಎರಡು ದಿನ ಪ್ರಯಾಣಿಕರಿಲ್ಲದ ಕಾರಣ ಬಸ್ ಸಂಚಾರ ಮೊಟಕುಗೊಂಡಿತ್ತು. ಹಾಗಾಗಿ ಸೋಮವಾರದಿಂದ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಬಸ್‌ಗಳನ್ನು ರಸ್ತೆಗಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನಾವು ಪರಿಸ್ಥಿತಿಯನ್ನು ಅವಲೋಕಿಸಿ ಬಸ್‌ಗಳನ್ನು ಓಡಿಸಲು ನಿರ್ಧರಿಸಿದ್ದೇವೆ. ಈಗಾಗಲೆ ಮುಂಗಡ ತೆರಿಗೆ ಪಾವತಿಸಿದ ಕಾರಣ ಬಸ್‌ಗಳನ್ನು ರಸ್ತೆಗಿಳಿಸದೆ ನಿರ್ವಾಹವಿಲ್ಲ. ಆದರೆ ಪ್ರಯಾಣಿಕರಿಲ್ಲದಿದ್ದರೆ ಬಸ್‌ಗಳನ್ನು ಓಡಿಸಿಯೂ ನಷ್ಟ ಅನುಭವಿಸಬೇಕಾಗುತ್ತದೆ. ಸೋಮವಾರದಿಂದ ಬಸ್‌ಗಳ ಸಂಚಾರಕ್ಕೆ ಸಿದ್ಧರಾಗಿದ್ದೇವೆ. ಆದಾಗ್ಯೂ ಸರಕಾರದ ಮಾರ್ಗಸೂಚಿ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News