×
Ad

ಸರಕಾರದ ನಿರ್ಲಕ್ಷ್ಯತೆ, ದ್ವಿಮುಖ ಧೋರಣೆಗಳೇ ಕೊರೋನ ನಿಯಂತ್ರಣದಲ್ಲಿನ ವೈಫಲ್ಯ: ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಆರೋಪ

Update: 2021-04-25 21:35 IST

ಮಂಗಳೂರು, ಎ. 25: ರಾಜ್ಯದಲ್ಲಿ  ಕೊರೋನ ತನ್ನ ಎರಡನೇ ಅಲೆಯಲ್ಲಿ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಸಾಕಷ್ಟು ಮುಂಜಾಗ್ರತೆಗಳನ್ನು, ಸಮರ್ಪಕವಾಗಿ ಕೈಗೊಳ್ಳದ ಕಾರಣದಿಂದಲೇ ಇಂದು ಇದು ಕೈಮೀರಿ ಹೋಗುವ ಹಂತಕ್ಕೆ ತಲುಪಿದೆ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾ ಘಟಕ ಆರೋಪಿಸಿದೆ.

ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ ಕಳೆದ ವರ್ಷ ಕೊರೋನ ವೈರಸ್ ಜಿಲ್ಲೆಯಲ್ಲಿ ವ್ಯಾಪಿಸುವ ಮೊದಲೇ ಅಂದರೆ ಪ್ರಥಮ ಲಾಕ್ ಡೌನ್ ಆರಂಭದಲ್ಲೇ ಕೆಲವು ನಿರ್ದೇಶನಗಳನ್ನು ನೀಡಿದ್ದೆವು ಆದರೆ ಅವೆಲ್ಲವನ್ನೂ ಅಂದು ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷಿಸಿತು ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾಧ್ಯಕ್ಷ, ಅಡ್ವೋಕೇಟ್ ಸರ್ಫ್ರಾಝ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್  ಪ್ರಕಟಣೆಯಲ್ಲಿ ತಿಳಿಸಿದರು.

ಇದೀಗ ಕೊರೋನ ಎರಡನೇ ಅಲೆ ಎಂಬುವುದರ ಬಗ್ಗೆ  ಹೇಳುವುದಾದರೆ, ಈ (ಏಪ್ರಿಲ್) ತಿಂಗಳ  ಕಳೆದ 18ನೆಯ ತಾರೀಖಿನವರೆಗೂ ಜಿಲ್ಲೆಯ ವಿವಿಧೆಡೆಯಲ್ಲಿ, ಮದುವೆ, ಸಭೆ, ಸಮಾರಂಭಗಳೆಂದು ಎಗ್ಗಿಲ್ಲದಿರುವ ಜನಸಂದಣಿಯ ವಿವಿಧ  ಕಾರ್ಯಕ್ರಮಗಳು  ಸಾಮಾನ್ಯವಾಗಿತ್ತು. ಆರೋಗ್ಯ ತಜ್ಞರ ಮುನ್ನೆಚ್ಚರಿಕೆಯ ಹೊರತಾಗಿಯೂ, ಸರಕಾರವು ಇಷ್ಟೊಂದು ಜನಜಾತ್ರೆಗಳನ್ನು ಹದ್ದು ಬಸ್ತಿನಲ್ಲಿಡುವ ಮೂಲಕ ರೋಗ ವ್ಯಾಪಿಸದಂತೆ ಕ್ರಮ ಕೈಗೊಳ್ಳದಿರುವುದು ವಿಷಾದನೀಯವೆಂದರಲ್ಲದೆ, ಕೊರೋನ ಮತ್ತೆ ಅಪ್ಪಳಿಸಲಿದೆಯೆಂಬ, ಅಪಾಯದ ಬಗ್ಗೆ ಸೂಚನೆ ಇದ್ದಾಗ್ಯೂ ಮುಂಬರುವ ಸಮಸ್ಯೆಗಳ ನಿಗಾ ವಹಿಸಿ, ನಮ್ಮ ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಬೇಕಾದ ಮೂಲಭೂತವಾಗಿ ಒದಗಿಸಬೇಕಾದ, ಅಕ್ಷಿಜನ್, ಲಸಿಕೆ, ಔಷಧಿಗಳನ್ನು ಪೂರೈಸುವ ಪೂರ್ವತಯಾರಿಯನ್ನು ಮಾಡಿಕೊಳ್ಳದಿರುವುದು ಸರಕಾರ ಮತ್ತು ಜಿಲ್ಲಾಡಳಿತದ ವೈಫಲ್ಯದ ಮತ್ತು  ಬೇಜವಾಬ್ದಾರಿಯ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತದೆಯೆಂದು ಹೇಳಿದ ಅವರು, ಸರ್ಕಾರ ಇನ್ನಾದರೂ  ತಕ್ಷಣ ಗಮನಹರಿಸಿ ಪ್ರಸಕ್ತವಾಗಿ ಕೊರೋನ ಕ್ಷಿಪ್ರಗತಿಯಲ್ಲಿನ  ಬೆಳವಣಿಗೆಗೆ ತಡೆಯಲ್ಪಡುವ ಸಲುವಾಗಿ ಕನಿಷ್ಠ ಕಾರ್ಯಕ್ರಮದ  ಯೋಜನೆಯನ್ನಾದರೂ ರೂಪಿಸಿಕೊಂಡು, ಆರೋಗ್ಯ ಇಲಾಖೆಯ ವತಿಯಿಂದ  ಪ್ರತಿ ಗ್ರಾಮೀಣ ಮಟ್ಟ ಮತ್ತು ಈಗಾಗಲೇ ರೋಗ ಗಣನೀಯವಾಗಿರುವ ನಗರಗಳ ಪ್ರತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಾಧ್ಯಂತ ಕ್ರಿಯಾಶೀಲರಾಗಬೇಕಾಗಿದೆ. ಇದು ಇನ್ನಷ್ಟು ಹಬ್ಬುವ ನಿಯಂತ್ರಣದ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ, ಇದರ ಪಸರಿಸುವ ವೇಗದ ತಡೆಗೆ  ಸಜ್ಜಾಗಬೇಕು ಮತ್ತು ತನ್ಮೂಲಕ ಇದನ್ನು ಇನ್ನಷ್ಟು ಸಮೂಹ   ಹರಡುವಿಕೆಗೆ ತಲುಪದಂತೆ ಜಾಗೃತರಾಗಬೇಕಾಗಿದೆ. ಸಾವಿನ ಸಂಖ್ಯೆಯು ಆತಂಕಕಾರಿ ಮಟ್ಟದಲ್ಲಿದ್ದರೂ, ಜನಸಾಮಾನ್ಯರನ್ನು ವಂಚಿಸುವ ರೀತಿಯಲ್ಲಿ, ರಾಜ್ಯದಲ್ಲಿ ಸಮಸ್ಯೆಗಳೇ ಇಲ್ಲವೆಂಬ ಆರೋಗ್ಯ ಸಚಿವರ ಬೇಜವಾಬ್ದಾರಿ ಹೇಳಿಕೆ ಅಕ್ಷಮ್ಯವಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News