ಔಷಧಗಳ ಮೇಲಿನ ಬೌದ್ಧಿಕ ಹಕ್ಕನ್ನು ತಾತ್ಕಾಲಿಕವಾಗಿ ರದ್ದುಪಡಿಸಿ: ಬೈಡನ್ ಸರಕಾರಕ್ಕೆ ಅಮೆರಿಕ ಸಂಸದರ ಒತ್ತಾಯ

Update: 2021-04-25 17:54 GMT

ವಾಶಿಂಗ್ಟನ್, ಎ. 25: ಭಾರತ ಸೇರಿದಂತೆ ಕೊರೋನ ವೈರಸ್ ಸಾಂಕ್ರಾಮಿಕದ ತೀವ್ರ ದಾಳಿಗೆ ತುತ್ತಾಗಿರುವ ದೇಶಗಳಿಗೆ ಸಹಾಯವಾಗುವಂತೆ ಔಷಧಗಳ ಮೇಲಿನ ಬೌದ್ಧಿಕ ಹಕ್ಕನ್ನು ತಾತ್ಕಾಲಿಕವಾಗಿ ರದ್ದುಪಡಿಸುವಂತೆ ಅಮೆರಿಕದ ಹಲವು ಸಂಸದರು ಅಧ್ಯಕ್ಷ ಜೋ ಬೈಡನ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಹಾಕುವುದು ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿದೆ. ಇದು ಕೊರೋನ ವೈರಸ್ ಮತ್ತಷ್ಟು ರೂಪಾಂತರಗೊಳ್ಳುವ ಸಾಧ್ಯತೆಯನ್ನು ಸೀಮಿತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಔಷಧ ತಯಾರಿಕಾ ಕಂಪೆನಿಗಳ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರದ್ದುಪಡಿಸುವ ವಿಷಯಕ್ಕೆ ಸಂಬಂಧಿಸಿ ಅಮೆರಿಕದ ಸೆನೆಟರ್‌ಗಳ ಗುಂಪೊಂದು ಅಧ್ಯಕ್ಷ ಜೋ ಬೈಡನ್‌ಗೆ ಪತ್ರ ಬರೆದಿದೆ. ಪತ್ರಕ್ಕೆ ಬರ್ನಿ ಸ್ಯಾಂಡರ್ಸ್, ಎಲಿಝಬೆತ್ ವಾರನ್, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಗೂ ಇತರ ಸುಮಾರು 100 ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರು ಸಹಿ ಹಾಕಿದ್ದಾರೆ.

ಔಷಧಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಪ್ರಸ್ತಾವವೊಂದನ್ನು ಭಾರತ ಮತ್ತು ದಕ್ಷಿಣ ಆಫ್ರಿಕಗಳ ನೇತೃತ್ವದಲ್ಲಿ ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಹಿಂದೆ ಮಂಡಿಸಲಾಗಿತ್ತು. ಆದರೆ ಈ ಕುರಿತ ಸಮಾಲೋಚನೆಗಳನ್ನು ಅಮೆರಿಕ ಮತ್ತು ಇತರ ಬೆರಳೆಣಿಕೆಯ ದೊಡ್ಡ ದೇಶಗಳು ತಡೆಹಿಡಿದಿದ್ದವು. ಈಗ ಈ ಪ್ರಸ್ತಾವವನ್ನು ವಿಶ್ವ ವ್ಯಾಪಾರ ಸಂಘಟನೆಯ 100 ಸದಸ್ಯ ದೇಶಗಳು ಬೆಂಬಲಿಸುತ್ತಿವೆ.

ಈ ಪ್ರಸ್ತಾವವು ಅನುಮೋದನೆಗೊಂಡರೆ ಔಷಧ ತಯಾರಿಕಾ ಕಂಪೆನಿಗಳು ಹೊಂದಿರುವ ಬೌದ್ಧಿಕ ಆಸ್ತಿ ಹಕ್ಕುಗಳು ತಾತ್ಕಾಲಿಕವಾಗಿ ರದ್ದುಗೊಳ್ಳುತ್ತವೆ ಹಾಗೂ ಲಸಿಕೆಗಳನ್ನು ಉತ್ಪಾದಿಸಲು ಅಭಿವೃದ್ಧಿಶೀಲ ದೇಶಗಳಿಗೆ ಅನುಮತಿ ದೊರೆಯುತ್ತದೆ.

ಈ ವಿಷಯದ ಬಗ್ಗೆ ಮೇ 5ರಂದು ನಡೆಯಲಿರುವ ಮುಂದಿನ ಔಪಚಾರಿಕ ವಿಶ್ವ ವ್ಯಾಪಾರ ಒಪ್ಪಂದದ ಸಮ್ಮೇಳನಕ್ಕೆ ಮುನ್ನ ತನ್ನ ನಿಲುವನ್ನು ಬದಲಿಸುವಂತೆ ಈ ಪ್ರಸ್ತಾವದ ಬೆಂಬಲಿಗರು ಅಮೆರಿಕವನ್ನು ಒತ್ತಾಯಿಸುತ್ತಿದ್ದಾರೆ.

ಭಾರತಕ್ಕೆ ಹೆಚ್ಚಿನ ನೆರವು: ಅಮೆರಿಕ ಭರವಸೆ

ಕೊರೋನ ವೈರಸ್ ಸಾಂಕ್ರಾಮಿಕದ ತೀವ್ರ ದಾಳಿಯಿಂದ ತತ್ತರಿಸುತ್ತಿರುವ ಭಾರತಕ್ಕೆ ಹೆಚ್ಚಿನ ನೆರವನ್ನು ಕಳುಹಿಸುವ ಭರವಸೆಯನ್ನು ಅಮೆರಿಕ ನೀಡಿದೆ. ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳಲ್ಲಿನ ಅಗಾಧ ಹೆಚ್ಚಳದಿಂದಾಗಿ ತಾನು ಭಾರೀ ಕಳವಳಗೊಂಡಿರುವುದಾಗಿ ಅಮೆರಿಕ ಹೇಳಿದೆ.

ಭಾರತದಲ್ಲಿ ಸತತ ನಾಲ್ಕು ದಿನಗಳಿಂದ ಜಾಗತಿಕ ದಾಖಲೆಯ ಮಟ್ಟದ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಅಮೆರಿಕದಲ್ಲಿ ಈವರೆಗೆ ಕೊರೋನ ವೈರಸ್‌ ನಿಂದಾಗಿ ಗರಿಷ್ಠ ಸಂಖ್ಯೆಯ ಸಾವುಗಳು ಸಂಭವಿಸಿವೆ.

ಭಾರತದಲ್ಲಿ ಸಾಂಕ್ರಾಮಿಕವು ತೀವ್ರವಾಗಿ ಉಲ್ಬಣಿಸುತ್ತಿರುವಂತೆಯೇ, ಆ ದೇಶದೊಂದಿಗೆ ಅತ್ಯುನ್ನತ ಮಟ್ಟದಲ್ಲಿ ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಹಾಗೂ ಭಾರತ ಸರಕಾರ ಮತ್ತು ಭಾರತೀಯ ಆರೋಗ್ಯ ರಕ್ಷಣೆ ಕೆಲಸಗಾರರಿಗೆ ಕ್ಷಿಪ್ರವಾಗಿ ಹೆಚ್ಚುವರಿ ನೆರವನ್ನು ನೀಡುವ ಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಶ್ವೇತಭವನದ ವಕ್ತಾರೆಯೊಬ್ಬರು ಶನಿವಾರ ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಆಸ್ಟ್ರಝೆನೆಕ ಲಸಿಕೆ ಕಳುಹಿಸಿ: ಬೈಡನ್‌ಗೆ ಭಾರತೀಯ ಅಮೆರಿಕ ಸಂಸದ ಒತ್ತಾಯ

ಭಾರತ ಸೇರಿದಂತೆ ಪ್ರಸಕ್ತ ಕೊರೋನ ವೈರಸ್ ಸಾಂಕ್ರಾಮಿಕದ ತೀವ್ರ ದಾಳಿಗೆ ತುತ್ತಾಗಿರುವ ದೇಶಗಳಿಗೆ ಆಸ್ಟ್ರಝೆನೆಕ ಲಸಿಕೆಯನ್ನು ಬಿಡುಗಡೆ ಮಾಡುವಂತೆ ಅಮೆರಿಕದ ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಶನಿವಾರ ಅಮೆರಿಕದ ಜೋ ಬೈಡನ್ ಸರಕಾರಕ್ಕೆ ಕರೆ ನೀಡಿದ್ದಾರೆ.

ಪ್ರಸಕ್ತ ಅಮೆರಿಕ 4 ಕೋಟಿ ಡೋಸ್ ಆಸ್ಟ್ರಝೆನೆಕ ಡೋಸ್‌ಗಳ ಸಂಗ್ರಹವನ್ನು ಹೊಂದಿದೆ. ಇದನ್ನು ನಾವೀಗ ಬಳಸುತ್ತಿಲ್ಲ ಹಾಗೂ ಅದನ್ನು ಈಗಾಗಲೇ ಮೆಕ್ಸಿಕೊ ಮತ್ತು ಕೆನಡಗಳಲ್ಲಿ ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಬಳಸಿಕೊಳ್ಳುತ್ತಿದ್ದೇವೆ ಎಂದು ಕೃಷ್ಣಮೂರ್ತಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News