ಕೊರೋನ ಲಸಿಕಾ ಅಭಿಯಾನ: 100 ಕೋಟಿ ದಾಟಿದ ಡೋಸ್

Update: 2021-04-25 17:58 GMT

ಪ್ಯಾರಿಸ್ (ಫ್ರಾನ್ಸ್), ಎ. 25: ಈವರೆಗೆ ಜಗತ್ತಿನಾದ್ಯಂತ 100 ಕೋಟಿಗೂ ಅಧಿಕ ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ನೀಡಲಾಗಿದೆ ಎಂದು ಅಂಕಿಸಂಖ್ಯೆಗಳು ತಿಳಿಸಿವೆ. ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ಭಾರತ ಸೇರಿದಂತೆ ಕೇವಲ ಮೂರು ದೇಶಗಳಲ್ಲಿ ಬಳಸಲಾಗಿದೆ.

ಮೊದಲ ಸಾಮೂಹಿಕ ಲಸಿಕಾ ಕಾರ್ಯಕ್ರಮಗಳು ಸುಮಾರು 5 ತಿಂಗಳ ಹಿಂದೆ ಆರಂಭಗೊಂಡಂದಿನಿಂದ ಭಾರತೀಯ ಕಾಲಮಾನ ಶನಿವಾರ ರಾತ್ರಿ 11:15ರ ಸುಮಾರಿಗೆ 207 ದೇಶಗಳು ಮತ್ತು ಭೂಭಾಗಗಳಲ್ಲಿ ಕನಿಷ್ಠ 100 ಕೋಟಿ 29 ಲಕ್ಷ 38 ಸಾವಿರದ 540 ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳ ಅಂಕಿಸಂಖ್ಯೆಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶನಿವಾರ ಜಗತ್ತಿನಾದ್ಯಂತ 8.93 ಲಕ್ಷ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿರುವಂತೆಯೇ, ಲಸಿಕೆ ನೀಡಿಕೆಯಲ್ಲೂ ಈ ಮೈಲಿಗಲ್ಲು ದಾಖಲಾಗಿದೆ. ಜಾಗತಿಕ ಕೊರೋನ ಸೋಂಕುಗಳ ಪೈಕಿ ಸಿಂಹಪಾಲು ಭಾರತದ್ದಾಗಿದೆ.

ಒಟ್ಟು ಲಸಿಕೆ ಡೋಸ್‌ಗಳ 58 ಶೇಕಡದಷ್ಟನ್ನು ಕೇವಲ ಮೂರು ದೇಶಗಳಲ್ಲಿ ನೀಡಲಾಗಿದೆ. ಅಮೆರಿಕದಲ್ಲಿ 22.56 ಕೋಟಿ ಡೋಸ್‌ಗಳು, ಚೀನಾದಲ್ಲಿ 21.61 ಕೋಟಿ ಡೋಸ್‌ಗಳು ಮತ್ತು ಭಾರತದಲ್ಲಿ 13.84 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

ಆದರೆ. ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದರೆ ಲಸಿಕೆ ನೀಡಿಕೆ ಅಭಿಯಾನದಲ್ಲಿ ಇಸ್ರೇಲ್ ಮುಂದಿದೆ. ಅಲ್ಲಿ ಪ್ರತಿ 10 ಮಂದಿಯ ಪೈಕಿ ಸುಮಾರು 6 ಮಂದಿ ಸಂಪೂರ್ಣ ಲಸಿಕೆ ಕಾರ್ಯಕ್ರಮಕ್ಕೆ ಒಳಪಟ್ಟಿದ್ದಾರೆ.

ನಂತರದ ಸ್ಥಾನಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಇಲ್ಲಿ ಜನಸಂಖ್ಯೆಯ 51 ಶೇಕಡ ಮಂದಿ ಕನಿಷ್ಠ ಒಂದು ಡೋಸ್ ಸ್ವೀಕರಿಸಿದ್ದಾರೆ), ಬ್ರಿಟನ್ (49 ಶೇಕಡ), ಅಮೆರಿಕ (42 ಶೇಕಡ), ಚಿಲಿ (41 ಶೇಕಡ), ಬಹರೈನ್ (38 ಶೇಕಡ), ಉರುಗ್ವೆ (32 ಶೇಕಡ) ದೇಶಗಳಿವೆ.

► ಲಸಿಕೆ ವಿತರಣೆಯಲ್ಲಿ ಅಸಮಾನತೆ

ವಿಶ್ವ ಆರೋಗ್ಯ ಸಂಸ್ಥೆಯ ಲಸಿಕಾ ಕಾರ್ಯಕ್ರಮ ಕೋವ್ಯಾಕ್ಸ್‌ನಿಂದಾಗಿ ಹೆಚ್ಚಿನ ಬಡ ದೇಶಗಳಲ್ಲೂ ಲಸಿಕಾ ಅಭಿಯಾನ ಆರಂಭಗೊಂಡಿದೆ. ಆದರೆ, ಲಸಿಕಾ ಕಾರ್ಯಕ್ರಮದ ಗರಿಷ್ಠ ಪ್ರಯೋಜನವನ್ನು ಶ್ರೀಮಂತ ದೇಶಗಳು ಪಡೆಯುತ್ತಿವೆ. ಶ್ರೀಮಂತ ದೇಶಗಳಲ್ಲಿ ಜಾಗತಿಕ ಜನಸಂಖ್ಯೆಯ 16 ಶೇಕಡದಷ್ಟು ವಾಸಿಸುತ್ತಾರೆ. ಆದರೆ ಆ ದೇಶಗಳ ನಿವಾಸಿಗಳಿಗೆ 47 ಶೇಡಕ ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ.

ಒಟ್ಟು ಲಸಿಕೆಯ 0.2 ಶೇಕಡಷ್ಟನ್ನು ಮಾತ್ರ ಬಡ ದೇಶಗಳಲ್ಲಿ ನೀಡಲಾಗಿದೆ ಎಂದು ವಿಶ್ವಸಂಸ್ಥೆ ಈ ತಿಂಗಳ ಆದಿ ಭಾಗದಲ್ಲಿ ತಿಳಿಸಿದೆ.

► ಈ ದೇಶಗಳಿಗೆ ಇನ್ನೂ ಲಸಿಕೆಯೇ ತಲುಪಿಲ್ಲ

ಸುಮಾರು 12 ದೇಶಗಳಲ್ಲಿ ಇನ್ನೂ ಲಸಿಕೆ ನೀಡಿಕೆ ಅಭಿಯಾನವೇ ಆರಂಭಗೊಂಡಿಲ್ಲ. ಆ ಪೈಕಿ 7 ದೇಶಗಳು ಆಫ್ರಿಕ ಖಂಡದಲ್ಲಿವೆ. ಅವುಗಳೆಂದರೆ ತಾಂಝಾನಿಯ, ಮಡಗಾಸ್ಕರ್, ಬುರ್ಕಿನಫಾಸೊ, ಚಾಡ್, ಬುರುಂಡಿ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್ ಮತ್ತು ಎರಿಟ್ಟಿಯ. ಮೂರು ದೇಶಗಳು ಓಶಾನಿಯದಲ್ಲಿವೆ. ಅವುಗಳೆಂದರೆ ವನೌಟು, ಸಮೋರ ಮತ್ತು ಕಿರಿಬತಿ ಹಾಗೂ ಒಂದು ದೇಶ ಕೆರಿಬಿಯನ್‌ನಲ್ಲಿದೆ. ಕೆರಿಬಿಯನ್‌ನಲ್ಲಿರುವ ದೇಶ ಹೈತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News