ಕ್ರಿಕೆಟಿಗರೇ, ಕಣ್ಣು-ಕಿವಿ ಮುಚ್ಚಿಕೊಂಡು ಕುಳಿತುಕೊಳ್ಳಬೇಡಿ : ಅಭಿನವ್ ಬಿಂದ್ರಾ

Update: 2021-04-26 04:42 GMT

ಹೊಸದಿಲ್ಲಿ: ಭಾರತದ ಕ್ರೀಡಾಪಟುಗಳು ಅದರಲ್ಲೂ ಮುಖ್ಯವಾಗಿ ಕ್ರಿಕೆಟಿಗರು ಬಾಹ್ಯ ಜಗತ್ತಿನ ಬೆಳವಣಿಗೆಗಳಿಗೂ ತಮಗೂ ಸಂಬಂಧವೇ ಇಲ್ಲ ಎಂದು ಕಣ್ಣು, ಕಿವಿ ಮುಚ್ಚಿಕೊಂಡಿರುವಂತಿಲ್ಲ ಎಂದು ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಮಾತಿನ ಚಾಟಿ ಬೀಸಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರೆದಿರುವ ಲೇಖನದಲ್ಲಿ ಅವರು, ಭೀಕರ ಸಾಂಕ್ರಾಮಿಕದ ನಡುವೆಯೂ ದೇಶದಲ್ಲಿ ಐಪಿಎಲ್ ಮುಂದುವರಿಸಿರುವ ಕುರಿತ ಚರ್ಚೆ ಬಗ್ಗೆ ನೇರವಾಗಿ ಉಲ್ಲೇಖಿಸದಿದ್ದರೂ, ಭಾರತದ ಕ್ರೀಡಾಪಟುಗಳು ದೇಶದ ಹಿತಾಸಕ್ತಿಗೆ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಕ್ರೀಡೆಗಳಲ್ಲಿ ಹಲವು ಮಂದಿ ಸಾಧನೆ ಮಾಡಿ ಹೀರೊಗಳೆನಿಸಿರಬಹುದು. ಆದರೆ ನಾವು ಯಾರ ಜೀವವನ್ನೂ ಉಳಿಸುತ್ತಿಲ್ಲ. ಆದ್ದರಿಂದ ನಮ್ಮ ಸಾಧನೆಗಳನ್ನು ಬದಿಗಿಟ್ಟು, ನಮ್ಮ ಸುತ್ತ ಏನು ನಡೆಯುತ್ತಿದೆ ಎಂದು ನೋಡೋಣ. ಎಲ್ಲ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಜೀವಗಳನ್ನು ಉಳಿಸಲು ಹೇಗೆ ಪ್ರಯತ್ನಿಸುತ್ತಿದ್ದಾರೆ ಎಂದು ನೋಡೋಣ. ಅವರು ನೈಜ ಹೀರೊಗಳು. ಆದ್ದರಿಂದ ಅವರಿಗೆ ನಾವು ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವೆನಿಸಿದರೆ ಮಾಡೋಣ" ಎಂದು ಸಲಹೆ ಮಾಡಿದ್ದಾರೆ.

"ಐಪಿಎಲ್ ಆಟಗಾರರು ಇಂಥ ಸಂಕಷ್ಟದ ಸಂದರ್ಭದಲ್ಲೂ ಐಪಿಎಲ್ ಆಡಲು ಹೇಗೆ ಸಾಧ್ಯವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರೂ ಕನಿಷ್ಠ ಮಾಸ್ಕ್ ಧರಿಸುವ ಮಹತ್ವ, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಅಥವಾ ಜನರ ಆರೋಗ್ಯ ಅಗತ್ಯತೆಯ ಬಗ್ಗೆ ಸೃಜನಶೀಲ ವಿಧಾನದಲ್ಲಿ ಕನಿಷ್ಠ ಸೂಕ್ತ ಸಂದೇಶವನ್ನು ಸಾರುವ ಕೆಲಸವನ್ನಾದರೂ ಮಾಡಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ. ಸೂಕ್ತ ಸಂದೇಶ ಸಾರುವ ಜತೆಗೆ ಸಾಂಕ್ರಾಮಿಕದ ನಿಯಂತ್ರಣಕ್ಕಾಗಿ ಹಣಕಾಸು ದೇಣಿಗೆ ನೀಡಬೇಕು ಎಂದು ಸಲಹೆ ಮಾಡಿದ್ದಾರೆ.

ಎರಡನೆಯದಾಗಿ ನಾನು ಬಿಸಿಸಿಐ ಅಧ್ಯಕ್ಷನಾಗಿದ್ದರೆ ಮತ್ತು ಸಾಮರ್ಥ್ಯ ಇದ್ದರೆ ನಾನು ದೊಡ್ಡ ಮೊತ್ತವನ್ನು ಲಸಿಕೆ ಅಭಿಯಾನಕ್ಕೆ ಅಥವಾ ಇತರ ಬಗೆಯಲ್ಲಿ ನೆರವಾಗಲು ನೀಡುತ್ತಿದ್ದೆ. ಇದು ಐಪಿಎಲ್ ನಡೆಸುವುದಕ್ಕೆ ನಿಜವಾದ ಸಮರ್ಥನೆಯಾಗುತ್ತದೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಎಂದು ಹೇಳಿದ್ದಾರೆ.

ಕ್ರಿಕೆಟಿಗರು ಹಾಗೂ ಅಧಿಕಾರಿಗಳು ತಮ್ಮದೇ ಭ್ರಾಂತಿಯಲ್ಲಿ ಬದುಕುವುದಲ್ಲ; ಹೊರಗೆ ಏನೇ ನಡೆಯುತ್ತಿದ್ದರೂ ಅದಕ್ಕೆ ಕುರುಡು ಅಥವಾ ಕಿವುಡಾಗಿ ಇರುವಂತಿಲ್ಲ. ನೀವು ಐಪಿಎಲ್ ಆಡುತ್ತಿರುವಾಗ ಸ್ಟೇಡಿಯಂ ಹೊರಗೆ ಆ್ಯಂಬುಲೆನ್ಸ್‌ಗಳು ಓಡಾಡುತ್ತಿವೆ ಎನ್ನುವ ಅರಿವೂ ನಿಮಗಿರಲಿ. ಆದ್ದರಿಂದ ಸಂಭ್ರಮಾಚಣೆ ಕನಿಷ್ಠವಾಗಿರಲಿ. ಏಕೆಂದರೆ ನೀವು ಸಮಾಜದ ಬಗೆಗೂ ಕನಿಷ್ಠ ಗೌರವ ಹೊಂದಿರಬೇಕು" ಎಂದು ಮಾತಿನ ಚಾಟಿ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News