×
Ad

ಕೊರೋನ ಸಂಕಷ್ಟ ಎದುರಿಸಲು ಮುಂದೆ ಬಂದ ಮಂಗಳೂರಿನ ಮಸೀದಿಗಳು

Update: 2021-04-26 13:45 IST

ಮಂಗಳೂರು :  ದೇಶದಲ್ಲಿ ಕೊರೋನ ಸೋಂಕು ಹೆಚ್ಚುತ್ತಿದ್ದು, ಇದರಿಂದ ಅಪಾರ ಸಾವು ನೋವುಗಳು ಸಂಭವಿಸುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಆವಶ್ಯಕ ಸಹಕಾರವನ್ನು ನೀಡಲು ಮಂಗಳೂರು ನಗರದ ಮಸೀದಿಗಳ ಆಡಳಿತ ಕಮಿಟಿ ಮುಂದೆ ಬಂದಿವೆ.

ಇದೇ  ಉದ್ದೇಶದಿಂದ ಮಂಗಳೂರು ಮಸ್ಜಿದ್ಸ್ ಅಸೋಸಿಯೇಷನ್ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ.  ಜಿಲ್ಲಾಡಳಿತದ ಅನುಮತಿ ಮತ್ತು ಸಹಕಾರದೊಂದಿಗೆ ಸೂಕ್ತ ಕಟ್ಟಡ ಸಿಕ್ಕಿದಲ್ಲಿ ಕೊರೋನ ಚಿಕಿತ್ಸಾ ಕೇಂದ್ರ ತೆರೆಯಲು ಮತ್ತು ಮಸೀದಿಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲಾಡಳಿತದ ಅನುಮತಿ ಮತ್ತು ಸಹಕಾರಕ್ಕಾಗಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. 

ಸಮಿತಿಯ ಸಂಚಾಲಕರಾಗಿ ಹಾಜಿ ಅಹ್ಮದ್ ಮೊಯ್ದಿನ್ ವರ್ಲ್ಡ್ ವೈಡ್, ಡಾ. ಜಲಾಲುದ್ದೀನ್, ಡಾ. ಸಮೀರ್, ಡಾ. ಅಬ್ದುಲ್ ಸಮದ್, ಹಾಜಿ ಬಿ ಎಂ ಮುಮ್ತಾಝ್ ಅಲಿ ಕೃಷ್ಣಾಪುರ, ಝಕರಿಯಾ ಪರ್ವೇಝ್, ಮಹಮ್ಮದ್ ಹುಸೈನ್,  ಬೋಳಾರ ಜುಮಾ ಮಸೀದಿ, ಕೆ ಎಂ ಅಶ್ರಫ್, ಬೋಳಾರ ಇಸ್ಲಾಮಿಕ್ ಸೆಂಟರ್ , ಎಸ್ ಎ ಖಲೀಲ್,  ಎಸ್. ಎಂ. ಫಾರೂಕ್,  ಜಾಮಿಯಾ ಮಸೀದಿ ಕುದ್ರೋಳಿ, ಎಐಎಂಡಿಸಿ, ಮಸ್ಜಿದ್ ಒನ್ ಮೂಮೆಂಟ್ ರನ್ನು ಆಯ್ಕೆ ಮಾಡಲಾಗಿದೆ.  ಸಮಿತಿಯ ಸದಸ್ಯರಾಗಿ ಸೈಯದ್ ಎಂ ಸಈದ್, ಸಯ್ಯದ್ ಮುಕರ್ರಂ, ಎಂಐ ಖಲೀಲ್, ರಶೀದುಲ್ಲಾ ,  ಎಸ್ ಎಂ ಬಾಷಾ, ಅಹ್ಮದ್ ಅನ್ಸಾರ್ ಆಯ್ಕೆಯಾಗಿದ್ದಾರೆ.

ಎಐಎಂಡಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಮ್ತಿಯಾಝ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಐಎಂಡಿಸಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ನಗರದ ಹಲವು ಮಸೀದಿಗಳು ಈ ಯೋಜನೆಯಲ್ಲಿ ಕೈ ಜೋಡಿಸಿದ್ದು, ಇನ್ನೂ  ಸೇರಲಿಚ್ಛಿಸುವ ಮಸೀದಿಯವರು ಸಮಿತಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News