×
Ad

ಮಂಗಳೂರು; ನೈಟ್ ಕರ್ಫ್ಯೂನಲ್ಲಿ ಪೊಲೀಸ್ ಸಿಬ್ಬಂದಿಯ ಮಾನವೀಯ ಸೇವೆ: ಪೊಲೀಸ್ ಆಯುಕ್ತರಿಂದ ಅಭಿನಂದನೆ

Update: 2021-04-26 16:05 IST

ಮಂಗಳೂರು, ಎ.26: ಗರ್ಭಿಣಿ ಮಹಿಳೆಯೊಂದಿಗೆ ಆಸ್ಪತ್ರೆಗೆ ಹೆರಿಗೆಗಾಗಿ ಸಾಗುತ್ತಿದ್ದ ವೇಳೆ ಕಾರು ಅರ್ಧದಾರಿಯಲ್ಲಿ ಕೆಟ್ಟು ಹೋದ ಸಂದರ್ಭ ಪೊಲೀಸ್ ಪಿಸಿಆರ್ ವಾಹನದಲ್ಲೇ ಆ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿಯನ್ನು ಕಮಿಷನರ್ ಎನ್. ಶಶಿಕುಮಾರ್ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಮಂಗಳೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಯಾದ ಎಎಸ್‌ಐ ಹರೀಶ್ ಹಾಗೂ ಸಿಪಿಸಿ ವಿಜಯ್ ಕುಮಾರ್ ಕುಮಾರ್‌ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಗುರವಾಯನೆಕೆರೆಯಿಂದ ಮಂಗಳೂರಿನ ಆಸ್ಪತ್ರೆಗೆ ಶುಕ್ರವಾರ ತಡರಾತ್ರಿ 1.15ರ ಸುಮಾರಿಗೆ ಸಿದ್ದೀಕ್‌ ಎಂಬವರು ತಮ್ಮ ಪತ್ನಿ ಶಾಹಿದಾ ಬಾನು (29ವರ್ಷ) ಅವರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆ ತರುತ್ತಿದ್ದ ವೇಳೆ ಅರ್ಕುಳ ಎಂಬಲ್ಲಿ ಕಾರು ಕೆಟ್ಟು ಹೋಗಿತ್ತು. ರಾತ್ರಿ ಕರ್ಫ್ಯೂ ಇದ್ದ ಕಾರಣ ಬೇರೆ ಯಾರಿಂದಲೂ ಸಹಾಯ ಪಡೆಯುವ ಸ್ಥಿತಿಯಲ್ಲಿರಲಿಲ್ಲ. ಆ ಸಂದರ್ಭ ನೈಟ್ ಬೀಟ್‌ನಲ್ಲಿದ್ದ ಪೊಲೀಸ್ ಗಸ್ತು ವಾಹನದ ಸಿಬ್ಬಂದಿ ಆತಂಕದಲ್ಲಿದ್ದ ಸಿದ್ದೀಕ್ ಕುಟುಂಬವನ್ನು ಗಮನಿಸಿ ತಕ್ಷಣ ನೆರವಿಗೆ ಮುಂದಾಗಿದ್ದಾರೆ. ತಮ್ಮ ಪಿಸಿಆರ್ ವಾಹನದಲ್ಲೇ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಶನಿವಾರ ಬೆಳಗ್ಗಿನ ಜಾವ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮನೆಯವರು ಮಾನವೀಯತೆಯ ಸಹಕಾರ ನೀಡಿದ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

‘‘ರಾತ್ರಿ ಕರ್ಫ್ಯೂ ಇದ್ದ ಕಾರಣ ವಾಹನಗಳಿಗೆ ಓಡಾಟಕ್ಕೆ ಅವಕಾಶ ಇರಲಿಲ್ಲ. ಕಾರಿನಲ್ಲಿ ಇಬ್ಬರು ಮಹಿಳೆಯರು ಹಾಗೂ ಗರ್ಭಿಣಿಯ ಪತಿ ಸೇರಿ ಇಬ್ಬರು ಪುರುಷರಿದ್ದರು. ಅವರಿಬ್ಬರೂ ಕಾರು ರಿಪೇರಿಗೆ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಈ ಸಂದರ್ಭ ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿ ತಮ್ಮ ವಾಹನ ನಿಲ್ಲಿಸಿ ವಿಚಾರಿಸಿ ನೆರವು ನೀಡಿದ್ದಾರೆ. ಆ್ಯಂಬುಲೆನ್ಸ್‌ಗೆ ಕರೆ ಮಾಡಿ ನೆರವು ಕೊಡಿಸಬಹುದಿತ್ತು. ಆದರೆ ತುಂಬು ಗರ್ಭಿಣಿಯಾಗಿದ್ದ ಕಾರಣ ಪೊಲೀಸ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿದ್ದಾರೆ ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಡಿಸಿಪಿ ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

ಸಿಬ್ಬಂದಿಯನ್ನು ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡ ಕಮಿಷನರ್ !

ಐಪಿಎಸ್ ಅಧಿಕಾರಿಯಾಗಿರುವ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಸಿಬ್ಬಂದಿಯ ಮಾನವೀಯತೆಯ ಕಾರ್ಯದ ಬಗ್ಗೆ ಮಾಹಿತಿ ನೀಡುವ ಸಂದರ್ಭ ತಮ್ಮ ಪಕ್ಕದಲ್ಲೇ ಎಎಸ್‌ಐ ಹರೀಶ್ ಹಾಗೂ ಸಿಪಿಸಿ ವಿಜಯ್ ಕುಮಾರ್ ಅವರನ್ನು ಕುಳ್ಳಿರಿಸುವ ಮೂಲಕ ಗೌರವ ನೀಡಿದರು. ಬಳಿಕ ಶಾಲು, ಹೂಮಾಲೆ ಹಾಗೂ ಹಣ್ಣು ಹಂಪಲಿನೊಂದಿಗೆ ಅವರನ್ನು ಗೌರವಿಸಿದರು.

ಎಎಸ್‌ಐ ಹರೀಶ್‌ರದ್ದು 34 ವರ್ಷಗಳ ಸೇವೆ: ನವೆಂಬರ್‌ನಲ್ಲಿ ನಿವೃತ್ತಿ!

ಎಎಸ್‌ಐ ಹರೀಶ್‌ರವರು ಕಳೆದ 34 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದಾರೆ. ನವೆಂಬರ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಇದೇ ವೇಳೆ ಬಳ್ಳಾರಿಯ ವಿಜಯ್ ಕುಮಾರ್ 10 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News