ವೆಂಟಿಲೇಟರ್ ದೊರೆಯದೆ ತಾನು 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಆಸ್ಪತ್ರೆಯಲ್ಲಿಯೇ ಮೃತಪಟ್ಟ ಹಿರಿಯ ವೈದ್ಯ
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‍ನ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯಲ್ಲಿ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 85 ವರ್ಷದ ವೈದ್ಯ ಜೆ ಕೆ ಮಿಶ್ರಾ ಕೋವಿಡ್ ಸೋಂಕಿಗೆ ತುತ್ತಾಗಿದ್ದರೂ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ಸೌಲಭ್ಯ ದೊರೆಯದೆ ತಾವು ಸೇವೆ ಸಲ್ಲಿಸಿದ ಆಸ್ಪತ್ರೆಯಲ್ಲಿಯೇ ತಮ್ಮ ಪತ್ನಿಯ ಕಣ್ಣೆದುರೇ ಮೃತಪಟ್ಟಿದ್ದಾರೆ.
ಎಪ್ರಿಲ್ 13ರಂದು ಡಾ. ಮಿಶ್ರಾ ಅವರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಮೂರು ದಿನಗಳ ನಂತರ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಹದಗೆಟ್ಟಾಗ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಒದಗಿಸಬೇಕೆಂದು ವೈದ್ಯರು ಶಿಫಾರಸು ಮಾಡಿದ್ದರು. ಆದರೆ ಡಾ. ಮಿಶ್ರಾ ಅವರಿಗಿಂತ ಮುನ್ನವೇ ದಾಖಲಾಗಿದ್ದ ರೋಗಿಗಳಿಗೆ ಆಸ್ಪತ್ರೆಯಲ್ಲಿನ ಸುಮಾರು 100 ವೆಂಟಿಲೇಟರ್‍ಗಳು ಬಳಕೆ ಮಾಡಲಾಗಿತ್ತು.
“ಡಾ. ಮಿಶ್ರಾ ಅವರಿಗಾಗಿ ಇನ್ನೊಂದು ರೋಗಿಯನ್ನು ವೆಂಟಿಲೇಟರ್‍ನಿಂದ ಹೊರತರುವುದು ಅಸಾಧ್ಯವಾಗಿತ್ತು,'' ಎಂದು ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಕಲ್ ಆಫೀಸರ್ ಸೂರ್ಯಭನ್ ಕುಶ್ವಾಹ ಹೇಳಿದ್ದಾರೆ.