×
Ad

ವರ್ತಕರಲ್ಲಿ ಗೊಂದಲ: ತೆರೆದ ಅಂಗಡಿ ಮುಚ್ಚಿಸಿದ ಪೊಲೀಸರು

Update: 2021-04-26 18:43 IST

ಉಡುಪಿ, ಎ.26: ವಾರಾಂತ್ಯ ಕರ್ಫ್ಯೂ ನಂತರದ ಸರಕಾರದ ಆದೇಶ ಬಗ್ಗೆ ವರ್ತಕರಲ್ಲಿ ಗೊಂದಲ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅಗತ್ಯ ಸೇವೆಗಳು ಮಾತ್ರವಲ್ಲದೆ ಬಹುತೇಕ ವಾಣಿಜ್ಯ ಮಳಿಗೆಗಳು ತೆರೆದಿರುವುದು ಕಂಡುಬಂದವು.

ಎ.22ರ ಆದೇಶದಂತೆ ಅಗತ್ಯ ಸೇವೆಗಳು ಹೊರತು ಪಡಿಸಿ, ಚಪ್ಪಲಿ, ಬಟ್ಟೆ, ಚಿನ್ನಾಭರಣ ಮಳಿಗೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸ ಲಾಗಿತ್ತು. ಆದರೆ ವಾರಾಂತ್ಯದ ಕರ್ಫ್ಯೂ ಬಳಿಕ ಈ ಕುರಿತ ಗೊಂದಲದಿಂದ ಬೆಳಗ್ಗೆ ನಗರದ ಕೆಲವು ಬಟ್ಟೆ, ಚಪ್ಪಲಿ, ಬೇಕರಿ, ಇತರ ವಾಣಿಜ್ಯ ಅಂಗಡಿಗಳು ತೆರೆದಿದ್ದವು.

ಮಾಹಿತಿ ತಿಳಿದು ಆಗಮಿಸಿದ ಉಡುಪಿ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಅಗತ್ಯ ಸೇವೆಗಳಾದ ಮೆಡಿಕಲ್, ಹಾಲು, ದಿನಸಿ, ತರಕಾರಿ, ಹೊಟೇಲ್ ಹೊರತು ಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ಮುಚ್ಚಿಸಿದರು. ಅದೇ ರೀತಿ ಬ್ರಹ್ಮಾವರ, ಕುಂದಾಪುರದಲ್ಲೂ ಇದೇ ಪೊಲೀಸರು ಅಂಗಡಿ ಗಳನ್ನು ಬಂದ್ ಮಾಡಿಸಿರುವ ಬಗ್ಗೆ ವರದಿಯಾಗಿದೆ.

ವಿರಳ ಪ್ರಯಾಣಿಕರ ಮಧ್ಯೆಯೂ ಖಾಸಗಿ, ಸರ್ವಿಸ್ ಬಸ್‌ಗಳು ಓಡಾಟ ನಡೆಸಿದ್ದವು. ಹೊಟೇಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಹೊಟೇಲ್‌ಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿರುವುದು ಕಂಡು ಬಂತು. ಥಿಯೇಟರ್, ಮಾಲ್‌ಗಳು ಬಂದ್ ಆಗಿದ್ದರೆ, ಪೆಟ್ರೋಲ್ ಬಂಕ್, ಬ್ಯಾಂಕ್, ಸರಕಾರಿ ಕಚೇರಿಗಳು ಸೇವೆ ನೀಡಿದ್ದವು. ಜಿಲ್ಲೆಯಾದ್ಯಂತ ಜನ ಹಾಗೂ ವಾಹನ ಸಂಚಾರ ತೀರಾ ಕಡಿಮೆಯಾಗಿರುವುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News