ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಕೆರಾಡಿ ಆಯ್ಕೆ

Update: 2021-04-26 14:00 GMT

ಕೊಲ್ಲೂರು, ಎ.26: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ಬಹು ನಿರೀಕ್ಷಿತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಇಂದು ನಡೆದಿದ್ದು, ಸಂಘ ಪರಿವಾರದ ಹಿನ್ನಲೆಯಿರುವ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ನಡುವೆ ಮುಸುಕಿನ ಗುದ್ದಾಟದ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಆಯ್ಕೆ ನಡೆದು ತಿಂಗಳುಗಳೇ ಕಳೆದಿದ್ದರೂ, ಅಧ್ಯಕ್ಷರ ಆಯ್ಕೆ ಮಾತ್ರ ಈವರೆಗೆ ನಡೆದಿರಲಿಲ್ಲ.
ಕೊನೆಗೂ ಸಾಕಷ್ಟು ಗೊಂದಲಗಳ ನಡುವೆ ಇಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಿತು.ಆದರೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಗೈರು ಹಾಜರಾಗಿದ್ದು, ಶಾಸಕರು ಮತ್ತು ಸಚಿವರ ನಡುವಿನ ಭಿನ್ನಮತ ಈ ಮೂಲಕ ಬಹಿರಂಗಕ್ಕೆ ಬಂದಿದೆ.

ಚಂದ್ರಶೇಖರ ಶೆಟ್ಟಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಣದ ಅಭ್ಯರ್ಥಿಯಾಗಿದ್ದೇ ಈ ಎಲ್ಲ ಅಸಮಾಧಾನಕ್ಕೆ ಮೂಲ ಕಾರಣ ಎನ್ನಲಾಗಿದೆ. ಹೀಗಾಗಿ ಚಂದ್ರಶೇಖರ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿಸಿದ್ದಕ್ಕೆ ಶಾಸಕ ಸುಕುಮಾರ್ ಶೆಟ್ಟಿ ಬಣದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಅಧ್ಯಕ್ಷರ ಆಯ್ಕೆ ನಡೆದ ಬಳಿಕ ಹೊರಬಂದು ಆಕ್ರೋಶ ಹೊರ ಹಾಕಿದ ಶಾಸಕರ ಬಣದವರು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಬೆಂಬಲಿಗರು ಕೈಕೈ ಮಿಲಾಯಿಸಲು ಹೋದ ಪ್ರಸಂಗವೂ ನಡೆದಿದ್ದು, ಈ ವೇಳೆ ಪೊಲೀಸರು ಮದ್ಯ ಪ್ರವೇಶಿಸಿ ಸಂಘರ್ಷವನ್ನು ತಪ್ಪಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News