ಲಾಕ್‌ಡೌನ್ ಮಾಡಿದರೆ ನಾವು ಏನು ಮಣ್ಣು ತಿನ್ನುವುದೇ ?: ಉಡುಪಿಯಿಂದ ಊರಿಗೆ ಗುಳೆ ಹೊರಟ ವಲಸೆ ಕಾರ್ಮಿಕರ ಆಕ್ರೋಶದ ನುಡಿ
ಉಡುಪಿ, ಎ.26: ''ಮೊದಲೇ ಕೆಲಸ ಇಲ್ಲದೆ ಸಾಯುತ್ತಿದ್ದೇವೆ. ಇನ್ನು ಇವರು ಲಾಕ್‌ಡೌನ್ ಮಾಡಿದರೆ ನಾವು ಏನು ಹೊಟ್ಟೆಗೆ ಮಣ್ಣು ತಿನ್ನುವುದೇ'' ರಾಜ್ಯ ಸರಕಾರ ಘೋಷಿಸಿರುವ 14 ದಿನಗಳ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಂದು ಉಡುಪಿಯಿಂದ ತಮ್ಮ ಊರಿಗೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಇಡೀ ಕುಟುಂಬದೊಂದಿಗೆ ಹೊರಟ ಕೊಪ್ಪಳ ಜಿಲ್ಲೆಯ ವಲಸೆ ಕಾರ್ಮಿಕ ಮಹಿಳೆ ಹನುಮಂತಿ ಎಂಬವರ ಆಕ್ರೋಶದ ಮಾತು ಇದು.
ಮುಂದಿನ 14 ದಿನಗಳ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆಯೇ ಸಂಜೆಯಿಂದ ರಾತ್ರಿಯವರೆಗೆ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರು ಸೇರುವ ತವಕದಲ್ಲಿ ಗಂಟು ಮೂಟೆ ಕಟ್ಟಿಕೊಂಡು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಧಾವಿಸಿ ಬರುವ ದೃಶ್ಯಗಳು ಕಂಡುಬಂದವು.
ಅದೇ ರೀತಿ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿನ ಬಟ್ಟೆ ಅಂಗಡಿ ಸೇರಿದಂತೆ ವಿವಿಧ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಯುವತಿ ಯರು, ಹಾಸ್ಟೆಲ್‌ಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು, ಮಲ್ಪೆ ಬಂದರಿನಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಸೇರಿದಂತೆ ನೂರಾರು ಸಂಖ್ಯೆಯ ಉತ್ತರ ಕರ್ನಾಟಕದ ಮಂದಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದರು. ಇವರಲ್ಲಿ ಹೆಚ್ಚಿನವರು ಕೊಪ್ಪಳ, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಜನ ಸೇರಿದ್ದಾರೆ.
ಮನೆ ಬಾಡಿಗೆ ಕೊಡಕ್ಕೆ ಹಣ ಇಲ್ಲ !
‘ಕಳೆದ ನಾಲ್ಕು ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತ ಕುಟುಂಬದ ಜೊತೆ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದೇವೆ. ಇದೀಗ ಲಾಕ್‌ಡೌನ್ ಮಾಡಿರುವುದರಿಂದ ಮನೆ ಬಾಡಿಗೆ ಕೊಡಲು ನಮ್ಮ ಬಳಿ ಹಣ ಇಲ್ಲ. ಅದಕ್ಕಾಗಿ ಊರಿಗೆ ಹೊರಟಿದ್ದೇವೆ’ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸುಬಾನ್ ಸಾಬ್ ತಿಳಿಸಿದರು.
‘ನಾವು ಮಾತ್ರವಲ್ಲ ನಮ್ಮಂತೆ ಬಂದರಿನಲ್ಲಿ ದುಡಿಯುವ 200-300 ಮಂದಿ ಇಂದು ರಾತ್ರಿಯೊಳಗೆ ಊರು ಸೇರಲು ಸಿದ್ಧರಾಗಿದ್ದೇವೆ. ಅಲ್ಲಿ ಹೋಗಿ ನಮ್ಮ ಹೊಲಗದ್ದೆಗಳಲ್ಲಿ ದುಡಿದು ತಿನ್ನುತ್ತೇವೆ. ಇಲ್ಲಿ ಇದ್ದುಕೊಂಡರೆ ಪತ್ನಿ, ಮಕ್ಕಳನ್ನು ನೋಡಿಕೊಳ್ಳಲು ಕಷ್ಟ ಆಗುತ್ತೆ’ ಎನ್ನುತ್ತಾರೆ ಕೊಪ್ಪಳದ ಸಿದ್ಧಪ್ಪ.
ಅದೇ ರೀತಿ ಕಾರ್ಕಳ ಮಿಯ್ಯರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂರಾರು ವಿದ್ಯಾರ್ಥಿಗಳು ತಮ್ಮ ಊರಿಗೆ ಹೊರಡಲು ಬಸ್ ನಿಲ್ದಾಣಕ್ಕೆ ಬಂದು ಬಸ್ ಕಾಯುತ್ತಿರುವ ದೃಶ್ಯ ಕಂಡುಬಂತು. ‘ಹಾಸ್ಟೆಲ್ ವಾರ್ಡನ್‌ಗಳೇ ನಮ್ಮನ್ನು ಊರಿಗೆ ಹೋಗಲು ಹೇಳಿದ್ದಾರೆ. ಮುಂದೆ ಲಾಕ್‌ಡೌನ್‌ನಿಂದ ಕಷ್ಟ ಆಗುತ್ತದೆ ಎಂಬುದನ್ನೇ ಅರಿತು ನಾವು ಊರಿಗೆ ಹೊರಟಿದ್ದೇವೆ’ ಎಂದು ವಿದ್ಯಾರ್ಥಿನಿಯೊಬ್ಬಳು ತಿಳಿಸಿದರು.
‘ದೇವರೇ ಬಸ್ ಸಿಕ್ಕಿದರೆ ಸಾಕು’
ತಮ್ಮ ಹೆಂಡ್ತಿ ಮಕ್ಕಳೊಂದು ಇಡೀ ಮನೆಯ ಸಾಮಾನುಗಳೊಂದಿಗೆ ಊರಿಗೆ ಹೊರಡಲು ಬಸ್ ನಿಲ್ದಾಣಕ್ಕೆ ಆಗಮಿಸಿದ ಬಾಗಲಕೋಟೆಯ ವಲಸೆ ಕಾರ್ಮಿಕರೊಬ್ಬರು, ‘ಹೇಗಾದರೂ ಮಾಡಿ ಊರು ತಲುಪಲು ಬಸ್ ಸಿಕ್ಕಿದರೆ ಸಾಕು’ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದರು.
‘ಇಲ್ಲಿ ಮೊದಲೇ ಕೆಲಸ ಸಿಗುವುದು ಕಷ್ಟ. ಅದರ ಮಧ್ಯೆ ಈ ಸರಕಾರದ ತಲೆ ಬುಡ ಇಲ್ಲದ ನಿಯಮಗಳು ನಮ್ಮ ಜೀವ ಹಿಂಡುತ್ತಿದೆ. ನಮಗೆ ನಮ್ಮ ಜೀವನದಲ್ಲಿ ದುಡಿಮೆ ಬಿಟ್ಟರೆ ಬೇರೆ ಏನು ಇಲ್ಲ. ಆದರೆ ಇವರು ಅದಕ್ಕೂ ಕಲ್ಲು ಹಾಕುತ್ತಿದ್ದಾರೆ’ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ತಡರಾತ್ರಿಯ ವರೆಗೂ ವಲಸೆ ಕಾರ್ಮಿಕರು ಕುಟುಂಬದೊಂದಿಗೆ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿರುವುದು ಕಂಡುಬಂತು. ಕೆಲವರು ಊರಿಗೆ ಹೋಗಲು ಬಸ್ ಸಿಗದೆ ನಿರಾಶೆಯಿಂದ ವಾಪಾಸ್ಸು ತಮ್ಮ ಬಿಡಾರಕ್ಕೆ ಹೊರಟರು.
ಹುಬ್ಬಳ್ಳಿ ಮಾರ್ಗದಲ್ಲಿ 20 ಹೆಚ್ಚುವರಿ ಸರಕಾರಿ ಬಸ್!
ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ಹೊರಡಲು ವಲಸೆ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿರುವುದರಿಂದ ಉಡುಪಿ ಮತ್ತು ಕುಂದಾಪುರ ಡಿಪೋದಿಂದ ಹುಬ್ಬಳ್ಳಿ, ಬಾಗಲಕೋಟೆ, ಕುಷ್ಟಗಿ ಮಾರ್ಗ ದಲ್ಲಿ ಹೆಚ್ಚುವರಿಯಾಗಿ ಒಟ್ಟು 15 ಕೆಎಸ್‌ಆರ್‌ಟಿಸಿ ಬಸ್‌ಗಳು ಹೊರಟಿವೆ.
‘ಸಂಜೆಯ ನಂತರ ಹುಬ್ಬಳ್ಳಿ ಮಾರ್ಗದಲ್ಲಿ ಉಡುಪಿ ಡಿಪೊದಿಂದ 9 ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗಿದೆ. ಒಂದು ಬಸ್ಸಿನಲ್ಲಿ 40ರಂತೆ ಪ್ರಯಾ ಣಿಕರು ಪ್ರಯಾಣ ಬೆಳೆಸಿದ್ದಾರೆ. ರಾತ್ರಿಯವರೆಗೂ ಬಸ್ ನಿಲ್ದಾಣಕ್ಕೆ ವಲಸೆ ಕಾರ್ಮಿಕರು ಬರುತ್ತಿದ್ದು, ಮತ್ತೆ ಹೆಚ್ಚುವರಿಯಾಗಿ ನಾಲ್ಕು ಬಸ್‌ಗಳನ್ನು ಬಿಡಲಾಗುವುದು’ ಎಂದು ಉಡುಪಿ ಡಿಪೋ ವ್ಯವ್ಥಾಪಕ ಉದಯ ಕುಮಾರ್ ತಿಳಿಸಿದ್ದಾರೆ.
‘ಕುಂದಾಪುರ ಡಿಪೋದಿಂದ ರಾತ್ರಿಯವರೆಗೆ ಹುಬ್ಬಳ್ಳಿ ಮಾರ್ಗದಲ್ಲಿ ರೂಟ್ ಬಸ್ ಬಿಟ್ಟು ಹೆಚ್ಚುವರಿಯಾಗಿ ಆರು ಬಸ್‌ಗಳನ್ನು ಓಡಿಸಲಾಗಿದೆ. ಇನ್ನು ಕೂಡ ವಲಸೆ ಕಾರ್ಮಿಕರು ಬರುತ್ತಿದ್ದು, ಮತ್ತೆ ಒಂದು ಹೆಚ್ಚುವರಿ ಬಸ್ಸನ್ನು ಸಿದ್ಧವಾಗಿ ಇಟ್ಟುಕೊಳ್ಳಲಾಗಿದೆ’ ಎಂದು ಕುಂದಾಪುರ ಡಿಪೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.