ಮಂಗಳೂರು: ಸಾಮಗ್ರಿಗಳ ಖರೀದಿಗೆ ಮುಗಿ ಬಿದ್ದ ಜನತೆ
ಮಂಗಳೂರು, ಎ.26: ಎರಡು ದಿನಗಳ ವೀಕೆಂಡ್ ಕರ್ಫ್ಯೂನಿಂದ ಸ್ತಬ್ಧಗೊಂಡಿದ್ದ ನಗರದಲ್ಲಿ ಸೋಮವಾರ ಮತ್ತೆ ಅಗತ್ಯ ಸೇವೆಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭಗೊಂಡು ಯಥಾಸ್ಥಿತಿಗೆ ಮರಳಿದಂತಹ ವಾತಾವರಣ ಕಂಡು ಬಂತು. ಆದರೆ ಮಧ್ಯಾಹ್ನದ ಹೊತ್ತಿಗೆ ರಾಜ್ಯ ಸರಕಾರ ಮತ್ತೆ ಎರಡು ವಾರಗಳ ಕರ್ಫ್ಯೂ ವಿಧಿಸಿದ್ದರಿಂದ ಕಂಗಾಲಾದ ಜನರು ಸಾಮಗ್ರಿಗಳ ಖರೀದಿಗೆ ಮುಗಿಬಿದ್ದರು.
ನಗರದ ಬಹುತೇಕ ಮಾರುಕಟ್ಟೆ, ಮಾಲ್ ಸಹಿತ ದಿನಸಿ, ತರಕಾರಿ, ಹಣ್ಣುಹಂಪಲು ಮತ್ತಿತರ ಅಗತ್ಯ ವಸ್ತುಗನ್ನು ಖರೀದಿಸುತ್ತಿರುವ ದೃಶ್ಯ ಕಂಡು ಬಂತು. ಅಲ್ಲದೆ ನಗರ ಸಹಿತ ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್‌ಗಳ ಸಹಿತ ರಿಕ್ಷಾ ಮತ್ತಿತರ ವಾಹನ ಸಂಚಾರ ಬೆಳಗ್ಗೆಯೇ ಆರಂಭಗೊಂಡರೂ ಕೂಡ ರಾತ್ರಿ 9ರ ವೇಳೆಗೆ ಸ್ಥಗಿತಗೊಂಡಿತ್ತು.
ಸರಕಾರದ ಹೊಸ ಆದೇಶದಂತೆ ಎ.27ರ ರಾತ್ರಿ 9ರಿಂದ ಮೇ 12ರ ಮುಂಜಾನೆ 6 ಗಂಟೆಯವರೆಗೆ ಕರ್ಫ್ಯೂ ಇದೆ. ಆದಾಗ್ಯೂ ಪ್ರತೀ ದಿನ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ದಿನಸಿ ಸಾಮಗ್ರಿ, ಹಾಲು, ಮಾಂಸ, ತರಕಾರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆ ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ. ಮೆಡಿಕಲ್, ಪೆಟ್ರೋಲ್, ಡೀಸೆಲ್ ಬಂಕ್, ಅಡುಗೆ ಅನಿಲ ಪೂರೈಕೆ, ಸಾಗಾಟಕ್ಕೆ ಯಾವುದೇ ತಡೆ ಇಲ್ಲ.
ಈ ಮಧ್ಯೆ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಸಂಜೆಯ ವೇಳೆಗೆ ಲಗೇಜ್‌ನೊಂದಿಗೆ ಊರಿಗೆ ಮರಳಲು ಬಸ್, ರೈಲು ನಿಲ್ದಾಣಗಳಲ್ಲಿ ನಿಂತಿರುವುದು ಕಂಡು ಬಂತು. ವಲಸೆ ಕಾರ್ಮಿಕರು ಜಿಲ್ಲೆ ಬಿಟ್ಟು ಹೋಗಬೇಡಿ, ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮನವಿ ಮಾಡಿದ್ದರೂ ಕೂಡ ನಗರದ ಕೆಲವು ಕಡೆ ವಲಸೆ ಕಾರ್ಮಿಕರು ಊರಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ಒಟ್ಟಿನಲ್ಲಿ ಎರಡು ದಿನದ ವೀಕೆಂಡ್ ಕರ್ಫ್ಯೂವಿನಿಂದ ಮುಕ್ತಿಪಡೆದ ಜನತೆ ಸೋಮವಾರ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ ಕೂಡ ಎ.27ರ ರಾತ್ರಿ 9ರಿಂದ ಮತ್ತೆ ಕರ್ಫ್ಯೂ ಘೋಷಿಸಿದ್ದರಿಂದ ಕಂಗಾಲಾಗಿದ್ದಾರೆ.