×
Ad

ಮೆಟ್ರೋ, ವಿಮಾನ ಖರೀದಿ ಯೋಜನೆ ಕೈ ಬಿಟ್ಟು ಕೊರೋನ ನಿಗ್ರಹ ಲಸಿಕೆ ಖರೀದಿಸಿ: ಐವನ್ ಡಿಸೋಜ

Update: 2021-04-26 22:41 IST

ಮಂಗಳೂರು, ಎ.26: ಕೇಂದ್ರ ಸರಕಾರ ಮೆಟ್ರೋ ವಿಸ್ತರಣೆಗೆ ಬಿಡುಗಡೆ ಮಾಡಿದ 20 ಸಾವಿರ ಕೋ.ರೂ.ಯೋಜನೆ ಮತ್ತು ಪ್ರಧಾನಿ ಮಂತ್ರಿ ಬಯಸಿರುವ 8,500 ಕೋ.ರೂ.ನ ವಿನೂತನ ವಿಮಾನ ಖರೀದಿ ಯೋಜನೆಯನ್ನು ಕೈಬಿಟ್ಟು ಕೊರೋನ ನಿಗ್ರಹ ಲಸಿಕೆ ಖರೀದಿಗೆ ಬಳಕೆ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಒತ್ತಾಯಿಸಿದ್ದಾರೆ.

 ಸೋಮವಾರ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೋನ ಪೀಡೀತರಿಗೆ ಆಕ್ಸಿಜನ್ ಬೆಡ್, ವೆಂಟಿಲೇಟರ್ ಮತ್ತು ಸಾಮಾನ್ಯ ಬೆಡ್‌ಗಳನ್ನು ಒದಗಿಸಲು ಸಂಪೂರ್ಣ ವಿಫಲವಾಗಿದೆ. ಪ್ರತೀ ದಿನ 30 ಸಾವಿರಕ್ಕಿಂತಲೂ ಅಧಿಕ ಕೋವಿಡ್ ಸೋಂಕು ಪ್ರಕರಣ ಪತ್ತೆ ಮತ್ತು 200ರಷ್ಟು ಸಾವುಗಳು ಸಂಭವಿಸುತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಕೈಗಟ್ಟಿ ಕುಳಿತಿರುವುದು ಸರಕಾರದ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಆಪಾದಿಸಿದರು.

ಬೆಡ್‌ಗಳ ಕೊರತೆ ನೀಗಿಸಲು ಸರಕಾರ ಕನಿಷ್ಠ 1ಲಕ್ಷ ಬೆಡ್‌ಗಳ ವ್ಯವಸ್ಥೆ ಮಾಡಬೇಕು. ಕಲ್ಯಾಣ ಮಂಟಪ, ಹಾಸ್ಟೆಲ್, ಇಂಡೋರ್ ಸ್ಟೇಡಿಯಂ, ಖಾಲಿಯಿರುವ ಕಾಲೇಜುಗಳಲ್ಲಿ ಆಕ್ಸಿಜನ್ ಪೂರೈಕೆಯುಳ್ಳ ಬೆಡ್‌ಗಳ ಕೊಠಡಿಯನ್ನು ಮಾಡಬೇಕು.

ರಾಜ್ಯದ 25 ಮಂದಿ ಬಿಜೆಪಿ ಸಂಸದರು ಪ್ರಧಾನಿಯ ನಿವಾಸದ ಮುಂದೆ ಧರಣಿ ಕುಳಿತು ರಾಜ್ಯಕ್ಕೆ ಆಕ್ಸಿಜನ್ ಒದಗಿಸಿಕೊಡಬೇಕು, ಎಲ್ಲ ಆರುವರೆ ಕೋಟಿ ಮಂದಿಗೂ ಕೋವಿಡ್ ವ್ಯಾಕ್ಸಿನನ್ನು ಉಚಿತವಾಗಿ ದೊರಕಿಸಿಕೊಡಬೇಕು, ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಸಹಾಯ ಧನ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ ಐವನ್ ಡಿಸೋಜ ದ.ಕ ಜಿಲ್ಲೆಯಲ್ಲಿ ದಿನವೊಂದಕ್ಕೆ 500ರಷ್ಟು ಕೊರೋನ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕೇವಲ 3,500 ಬೆಡ್‌ಗಳು ಮಾತ್ರಲಭ್ಯವಿರುತ್ತದೆ. ಇದೀಗ 4,000ಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಬಡ ರೋಗಿಗಳು ಆಯುಷ್ಮಾನ್ ಕಾರ್ಡ್ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಅವರ ಆಸ್ಪತ್ರೆ ಖರ್ಚುಗಳನ್ನು ಸರಕಾರವೇ ಭರಿಸಬೇಕು ಎಂದರು.

ಜಿಲ್ಲೆಯಲ್ಲಿ 15 ಲಕ್ಷಕ್ಕೂ ಅಧಿಕ ಕೋವಿಡ್ ಲಸಿಕೆ ಪಡೆಯಲು ಅರ್ಹರಿದ್ದಾರೆ. ಆದರೆ ರಾಜ್ಯ ಸರಕಾರ ಲಸಿಕೆ ಪೂರೈಕೆ ಮಾಡದ ಕಾರಣ ಸಮಸ್ಯೆ ಎದುರಾಗಿದೆ. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ಐವನ್ ಡಿಸೋಜ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ಒಬಿಸಿ ಘಟಕದ ರಾಜ್ಯ ವಕ್ತಾರ ಗಣೇಶ್ ಪೂಜಾರಿ, ಎಸ್.ಕೆ ಸೌಹಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News