ಕೊರೋನ ನಿರ್ವಹಣೆಯಲ್ಲಿ ವೈಫಲ್ಯ ಕುರಿತ ಲೇಖನ : ಆಸ್ಟ್ರೇಲಿಯಾ ಮಾಧ್ಯಮ ಮೇಲೆ ಹರಿಹಾಯ್ದ ಭಾರತೀಯ ಹೈಕಮಿಷನ್
ಹೊಸದಿಲ್ಲಿ,ಎ.27: ಕೋವಿಡ್-19 ನಿರ್ವಹಣೆಯ ಕುರಿತು ಟೀಕಿಸಿದ್ದ ಟ್ವೀಟ್ಗಳನ್ನು ತೆಗೆಸಿರುವ ಭಾರತ ಸರಕಾರದ ಕ್ರಮಕ್ಕೆ ಅಮೆರಿಕವು ಅಸಮ್ಮತಿ ವ್ಯಕ್ತಪಡಿಸಿದ್ದರೆ,ಪ್ರಧಾನಿ ಮೋದಿ ಅವರನ್ನು ಟೀಕಿಸಿರುವುದಕ್ಕಾಗಿ ಭಾರತೀಯ ರಾಯಭಾರ ಕಚೇರಿಯು ಆಸ್ಟ್ರೇಲಿಯಾದ ಅತ್ಯಂತ ಹೆಚ್ಚು ಪ್ರಸಾರವನ್ನು ಹೊಂದಿರುವ ದೈನಿಕ ‘ಆಸ್ಟ್ರೇಲಿಯನ್’ ಅನ್ನು ಖಂಡಿಸಿದೆ.
ಟ್ವಿಟರ್ ಕೋವಿಡ್-19 ನಿರ್ವಹಣೆಯನ್ನು ಟೀಕಿಸಿದ್ದ ಸುಮಾರು 50 ಟ್ವೀಟ್ಗಳನ್ನು ಭಾರತದಲ್ಲಿ ಸಾರ್ವಜನಿಕ ವೀಕ್ಷಣೆಯಿಂದ ತಡೆ ಹಿಡಿದಿದೆ. ಭಾರತ ಸರಕಾರದ ಮನವಿಯ ಮೇರೆಗೆ ತಾನು ಈ ಕ್ರಮವನ್ನು ಕೈಗೊಂಡಿರುವುದಾಗಿ ಅದು ತಿಳಿಸಿದೆ.
ಅಹಂಕಾರ,ಅತಿ ರಾಷ್ಟ್ರವಾದ ಮತ್ತು ಅಧಿಕಾರಶಾಹಿಯ ಅದಕ್ಷತೆ ಇವು ಒಟ್ಟುಗೂಡಿ ಭಾರತದಲ್ಲಿ ತೀವ್ರ ಬಿಕ್ಕಟ್ಟಿನ ಸ್ಥಿತಿಯನ್ನು ಸೃಷ್ಟಿಸಿವೆ. ಜನರ ಗುಂಪುಗಳನ್ನು ಇಷ್ಟಪಡುವ ಪ್ರಧಾನಿ ಹಾಯಾಗಿದ್ದರೆ ಪ್ರಜೆಗಳಿಗೆ ಉಸಿರುಗಟ್ಟುತ್ತಿದೆ ಎಂದು ಆಸ್ಟ್ರೇಲಿಯನ್ ತನ್ನ ‘ಮೋದಿ ಭಾರತವನ್ನು ಲಾಕ್ಡೌನ್ನಿಂದ ಹೊರತಂದು ವೈರಸ್ ದುರಂತದತ್ತ ಮುನ್ನಡೆಸುತ್ತಿದ್ದಾರೆ ’ಎಂಬ ಶೀರ್ಷಿಕೆಯ ತನ್ನ ಲೇಖನದಲ್ಲಿ ಬರೆದಿತ್ತು.
ಈ ಲೇಖನವನ್ನು ಸಂಪೂರ್ಣವಾಗಿ ಆಧಾರರಹಿತ,ದುರುದ್ದೇಶಪೂರ್ವಕ ಮತ್ತು ಅವಮಾನಕಾರಿಯಾಗಿದೆ ಎಂದು ಸೋಮವಾರ ತನ್ನ ಪತ್ರದಲ್ಲಿ ಭಾರತೀಯ ರಾಯಭಾರ ಕಚೇರಿಯು ಬಣ್ಣಿಸಿದೆ. ಈ ನಿರ್ಣಾಯಕ ಘಳಿಗೆಯಲ್ಲಿ ಸಾರ್ವತ್ರಿಕವಾಗಿ ಪ್ರಶಂಸೆಗೊಳಗಾಗಿರುವ,ಮಾರಣಾಂತಿಕ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಭಾರತ ಸರಕಾರವು ತೆಗೆದುಕೊಂಡಿರುವ ನಿಲುವನ್ನು ಕಡೆಗಣಿಸುವ ಏಕೈಕ ಉದ್ದೇಶದಿಂದ ಈ ಲೇಖನವನ್ನು ಬರೆದಿರುವಂತಿದೆ ಎಂದು ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿರುವ ಪತ್ರದಲ್ಲಿ ತಿಳಿಸಲಾಗಿದೆ.
ಅತ್ತ ವಾಷಿಂಗ್ಟನ್ನಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಟ್ವೀಟ್ಗಳನ್ನು ತಡೆಹಿಡಿದಿರುವ ಭಾರತ ಸರಕಾರದ ಕ್ರಮದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ವಕ್ತಾರರಾದ ಜೆನ್ ಸಾಕಿ ಅವರು,‘ಅದು ಖಂಡಿತವಾಗಿಯೂ ವಿಶ್ವಾದ್ಯಂತ ಅಭಿವ್ಯಕ್ತಿ ಸ್ವಾತಂತ್ರದ ಕುರಿತು ನಮ್ಮ ನಿಲುವಿಗೆ ಹೊಂದಾಣಿಕೆಯಾಗುವದಿಲ್ಲ ’ಎಂದು ತಿಳಿಸಿದರು.
ದೃಢೀಕೃತ ಖಾತೆಗಳಿಂದ ತೆಗೆಯಲಾಗಿರುವ ಹೆಚ್ಚಿನ ಟ್ವೀಟ್ಗಳು ಕೋವಿಡ್-19 ನಿರ್ವಹಣೆಯ ಕುರಿತು ಮೋದಿ ಸರಕಾರವನ್ನು ಕಟುವಾಗಿ ಪ್ರಶ್ನಿಸಿದ್ದವು. ಉದಾಹರಣೆಗೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಕುಂಭಮೇಳ ಮತ್ತು ಚುನಾವಣಾ ರ್ಯಾಲಿಗಳ ಕುರಿತು ಸಾಮೂಹಿಕ ವೌನವನ್ನು ಪ್ರಶ್ನಿಸಿ ಮಾಡಿದ್ದ ಟ್ವೀಟ್ ಅನ್ನು ತೆಗೆಯಲಾಗಿದೆ.
ವಿದೇಶಿ ಮಾಧ್ಯಮಗಳೂ ಎರಡನೇ ಅಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಕುಂಭಮೇಳವನ್ನು ನಡೆಸಲು ಅವಕಾಶ ನೀಡಿದ್ದರಲ್ಲಿ ಮತ್ತು ರಾಜಕೀಯ ರ್ಯಾಲಿಗಳನ್ನು ಆಯೋಜಿಸುವಲ್ಲಿ ಭಾರತ ಸರಕಾರದ ಪಾತ್ರವನ್ನು ಪರೋಕ್ಷವಾಗಿ ಟೀಕಿಸಿವೆ.
Arrogance, hyper-nationalism and bureaucratic incompetence have combined to create a crisis of epic proportions in India, with its crowd-loving PM basking while citizens suffocate. This is the story of how it all went so terribly wrong #coronavirus https://t.co/bL8VXkz5RD
— The Australian (@australian) April 25, 2021
Urge @australian to publish the rejoinder to set the record straight on the covid management in India and also refrain from publishing such baseless articles in future. @cgisydney @CGIPerth @cgimelbourne @MEAIndia https://t.co/4Z3Mk6ru3W pic.twitter.com/4bgWYnKDlB
— India in Australia (@HCICanberra) April 26, 2021