ಉದ್ಯಮಿ ಸಹಿತ ಇಬ್ಬರ ಅಪಹರಣ ಪ್ರಕರಣ: ಮಂಗಳೂರು ಪೊಲೀಸರಿಂದ ಏಳು ಮಂದಿ ಅಪಹರಣಕಾರರ ಬಂಧನ
ಮಂಗಳೂರು,ಎ.27: ನಗರ ಹೊರವಲಯದ ಉದ್ಯಮಿ ಮತ್ತವರ ಸ್ನೇಹಿತನನ್ನು ಅಪಹರಿಸಿ ನಿರ್ಮಾಣ ಹಂತದ ಮನೆಯೊಂದರ ಕಟ್ಟಡದಲ್ಲಿ ಒತ್ತೆಯಿಟ್ಟು ಹಣ, ಚಿನ್ನಾಭರಣ ಮತ್ತು ಜಮೀನಿನ ದಾಖಲೆ ಪತ್ರಕ್ಕಾಗಿ ಬೇಡಿಕೆ ಸಲ್ಲಿಸಿದ್ದ ಏಳು ಮಂದಿ ಅಪಹರಣಕಾರರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಮಾರಕಾಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತರನ್ನು ಮೂಲತಃ ಮಂಜೇಶ್ವರ ಸಮೀಪದ ಮಚ್ಚಂಪಾಡಿಯ ಪ್ರಸ್ತುತ ನಗರದ ಅತ್ತಾವರದ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ಅಹ್ಮದ್ ಇಕ್ಬಾಲ್ (33), ಮಚ್ಚಂಪಾಡಿಯ ನಿವಾಸಿಗಳಾದ ಯಾಕೂಬ್ ಎಂ. (33), ಉಮ್ಮರ್ ನವಾಫ್ (25), ಬಂದ್ಯೋಡ್‌ನ ಶಂಶೀರ್ (30), ಮಂಗಲ್ಪಾಡಿಯ ಸೈಯದ್ ಮುಹಮ್ಮದ್ ಕೌಸರ್ (41), ಮಚ್ಚಂಪಾಡಿಯ ನೌಶಾದ್ (27), ಉಪ್ಪಳದ ಶೇಖ್ ಮುಹಮ್ಮದ್ ರಿಯಾಝ್ (25) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೂರು ಕಾರು, ಎರಡು ತಲವಾರು, 1 ಡ್ಯಾಗರ್, 120 ಗ್ರಾಂ ತೂಕದ ಚಿನ್ನಾಭರಣ, ಜಮೀನಿನ ದಾಖಲಾತಿ ಪತ್ರ, ಬುಲೆಟ್ ಬೈಕ್‌ನ ಕೀ ಹಾಗೂ 10 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿದ್ದು, ಆ ಪೈಕಿ ಪ್ರಮುಖ ಆರೋಪಿ ಉಮ್ಮರ್ ನವಾಫ್‌ನಿಗೆ ಕೊರೋನ ಸೋಂಕು ತಗುಲಿದೆ. ಆತನಿಗೆ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೃತ್ಯದ ವಿವರ: ಎ.22ರಂದು ಮಧ್ಯಾಹ್ನ 1:30ಕ್ಕೆ ತಲಪಾಡಿ ಸಮೀಪದ ಕೆ.ಸಿ.ರೋಡ್‌ನಿಂದ ಉದ್ಯಮಿ ಅಹ್ಮದ್ ಅಶ್ರಫ್ ಎಂಬವರನ್ನು ತಂಡವೊಂದು ಕಾರಿನಲ್ಲಿ ಅಪಹರಿಸಿತ್ತು. ಬಳಿಕ ಈ ತಂಡ ಅಹ್ಮದ್ ಅಶ್ರಫ್‌ರ ಸ್ನೇಹಿತ ಜಾವೆದ್ ಎಂಬವರನ್ನು ಮಂಜೇಶ್ವರ ಸಮೀಪದ ಹೊಸಂಗಡಿಯಲ್ಲಿ ಅಪಹರಿಸಿತ್ತು. ಹಾಗೇ ಪೈವಳಿಕೆ ಎಂಬಲ್ಲಿ ನಿರ್ಮಾಣ ಹಂತದ ಮನೆಯೊಂದರ ಕಟ್ಟಡವೊಂದರಲ್ಲಿ ಇಬ್ಬರನ್ನೂ ಕೂಡಿ ಹಾಕಿದ ಅಪಹರಣಕಾರರು ದೈಹಿಕ ಹಲ್ಲೆ ನಡೆಸಿದರಲ್ಲದೆ 25 ಲಕ್ಷ ರೂ.ಮತ್ತು 60 ಸೆಂಟ್ಸ್ ಜಮೀನಿನ ದಾಖಲೆಪತ್ರ ಹಾಗೂ ಚಿನ್ನಾಭರಣ ನೀಡಬೇಕು ಎಂದು ಮನೆ ಮಂದಿಗೆ ಫೋನ್ ಕರೆ ಮಾಡಿ ಒತ್ತಾಯಿಸಿದ್ದರು. ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದರು. ಈ ಬಗ್ಗೆ ಅಹ್ಮದ್ ಅಶ್ರಫ್‌ರ ಪತ್ನಿ ರಶೀದಾ ಎಂಬವರು ಎ.23ರಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಎ.24ರಂದು ಸಂಜೆ 4:30ಕ್ಕೆ ತಲಪಾಡಿ ಸಮೀಪದ ಸಾಂತ್ಯ ಎಂಬಲ್ಲಿ ಅಪಹರಣಕ್ಕೊಳಗಾದ ಇಬ್ಬರನ್ನು ರಕ್ಷಿಸಿ, ಅಪಹರಿಸಿದ 7 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಪಟ್ಟು ಹಣದಾಸೆ
ಅಹ್ಮದ್ ಅಶ್ರಫ್ ಎಂಸಿಟಿ ಟ್ರೇಡಿಂಗ್ ಕಂಪೆನಿ, ಎಂಸಿಟಿ ಟೋಲ್ ಡೀಲ್, ಕ್ರಿಫ್ಲೋ ಕರೆನ್ಸಿ ಮತ್ತು ಫಾರೆಕ್ಟ್ ಟ್ರೇಡಿಂಗ್ ಕಂಪೆನಿಯನ್ನು ನಡೆಸುತ್ತಿದ್ದಾರೆ. ಈ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ 3 ಪಟ್ಟು ಹೆಚ್ಚು ಹಣ ಸಿಗುತ್ತದೆ ಎಂದು ಅಶ್ರಫ್ ಮತ್ತವರ ಸ್ನೇಹಿತ ಜಾವೆದ್ ನಂಬಿಸಿ ಅಹ್ಮದ್ ಇಕ್ಬಾಲ್‌ರಿಂದ ಹಂತ ಹಂತವಾಗಿ 27 ಲಕ್ಷ ರೂ. ಪಡೆದುಕೊಂಡಿದ್ದರು. ಎಂಸಿಟಿ ಕಂಪೆನಿಗೆ ಹೂಡಿದ ಹಣಕ್ಕೆ ಪ್ರತಿಯಾಗಿ ಲಾಭಾಂಶವು ಡಾಲರ್ ಮೂಲಕ ಖಾತೆಗೆ ಜಮೆಯಾಗುವ ನಿಯಮವಿದ್ದು, ಅದರಂತೆ ಅಹ್ಮದ್ ಇಕ್ಬಾಲ್‌ರ ಖಾತೆಗೆ ಲಾಭಾಂಶ ಸೇರಿ 99 ಲಕ್ಷ ರೂ. ಪಾವತಿಯಾಗಬೇಕಿತ್ತು. ಆ ಪೈಕಿ ಅಹ್ಮದ್ ಅಶ್ರಫ್ 10 ಲಕ್ಷ ರೂ.ವನ್ನು ಅಹ್ಮದ್ ಇಕ್ಬಾಲ್‌ಗೆ ನೀಡಿದ್ದು, ಉಳಿದ ಹಣ ನೀಡುವಂತೆ ಅಹ್ಮದ್ ಇಕ್ಬಾಲ್ ಒತ್ತಾಯಿಸುತ್ತಲೇ ಇದ್ದ. ಆದರೆ ಅಶ್ರಫ್ ಮತ್ತು ಜಾವೆದ್ ಹಣ ಮರಳಿಸದ ಕಾರಣ ಅಹ್ಮದ್ ಇಕ್ಬಾಲ್ ಇಬ್ಬರನ್ನೂ ಅಪಹರಿಸಲು ನಿರ್ಧರಿಸಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮೊದಲು ವಿದೇಶದಲ್ಲಿರುವ ನಪ್ಪಟೆ ರಫೀಕ್‌ನನ್ನು ಉಪ್ಪಳದ ಜಾಬೀರ್ ಮೂಲಕ ಅಹ್ಮದ್ ಇಕ್ಬಾಲ್ ಸಂಪರ್ಕಿಸಿ ಚರ್ಚೆ ನಡೆಸಿದ. ಈ ಕೃತ್ಯ ಎಸಗಲು ನಪ್ಪಟೆ ರಫೀಕ್ ದುಬಾರಿ ಹಣ ಕೇಳಿದ್ದರಿಂದ ಆತನನ್ನು ಕೈಬಿಟ್ಟ ಅಹ್ಮದ್ ಇಕ್ಬಾಲ್ ಮಚ್ಚಂಪಾಡಿಯ ಉಮ್ಮರ್ ನವಾಫ್‌ನನ್ನು ಮಚ್ಚಂಪಾಡಿಯ ಯಾಕೂಬ್ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದ. ಬಳಿಕ ಉಮ್ಮರ್ ನವಾಫ್‌ನ ಸೂಚನೆಯಂತೆ ಅಹ್ಮದ್ ಅಶ್ರಫ್‌ನನ್ನು ಎ.22ರಂದು ಮಧ್ಯಾಹ್ನ 1:30ಕ್ಕೆ ಕೆಸಿ ರೋಡ್ ಬಳಿಯಿಂದ ಕಾರಿನಲ್ಲಿ ಅಪಹರಿಸಲಾಯಿತು. ಅಲ್ಲಿಂದ ಹೊಸಂಗಡಿಗೆ ತೆರಳಿ ಅಲ್ಲಿ ಜಾವೆದ್‌ನನ್ನು ಅಪಹರಿಸಿದರು. ನಂತರ ಪೈವಳಿಕೆಯಲ್ಲಿ ನಿರ್ಮಾಣ ಹಂತದ ಮನೆಯೊಂದರ ಕಟ್ಟಡದಲ್ಲಿ ಇಬ್ಬರನ್ನೂ ಕೂಡಿ ಹಾಕಿ ಒತ್ತೆ ಇರಿಸಿ ಹಣ ಮತ್ತಿತರ ಸೊತ್ತಿಗಾಗಿ ಇಂಟರ್‌ನೆಟ್ ಮೂಲಕ ನೆಟ್‌ಕಾಲ್‌ನಲ್ಲಿ ಬೇಡಿಕೆ ಸಲ್ಲಿಸಿದರು. ಹಣ ಕೊಡದಿದ್ದರೆ ಕೊಲ್ಲುವುದಾಗಿಯೂ ಬೆದರಿಸಿದ್ದರು. ಉಪಾಯವಿಲ್ಲದೆ ಎರಡೂ ಮನೆಯವರು ಅಪಹರಣಕಾರರು ಕೇಳಿದ ಎಲ್ಲವನ್ನೂ ಒಪ್ಪಿಸಿದ್ದರು. ಆದರೆ ರಶೀದಾ ಅವರ ದೂರನ್ನು ಆಧರಿಸಿದ ಮಂಗಳೂರು ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿ ಎ.24ರಂದು ಸಂಜೆ ತಲಪಾಡಿ ಬಳಿ ಇಬ್ಬರನ್ನು ರಕ್ಷಿಸಿ 7 ಮಂದಿಯನ್ನು ಬಂಧಿಸಿ ಜಮೀನಿನ ದಾಖಲೆಪತ್ರ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದ್ದು ಅವರ ಬಂಧನಕ್ಕೆ ಪ್ರಯತ್ನ ಸಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಉಮ್ಮರ್ ನವಾಫ್ ಎಂಬಾತ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಉಳ್ಳಾಲ, ಮಂಜೇಶ್ವರ, ಕಾಸರಗೋಡು ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಸುಲಿಗೆ ಸಹಿತ 10ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಈತನು ವಿದೇಶದಲ್ಲಿರುವ ಕ್ರಿಮಿನಲ್‌ಗಳ ಜೊತೆಯೂ ನಂಟು ಹೊಂದಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಂಜಿತ್ ಕುಮಾರ್ ಬಂಡಾರು, ಉಳ್ಳಾಲ ಇನ್‌ಸ್ಪೆಕ್ಟರ್ ಸಂದೀಪ್ ಜಿ.ಎಸ್., ಎಸ್ಸೈಗಳಾದ ಪ್ರದೀಪ್ ಟಿ.ಆರ್., ರೇವಣ್ಣ ಸಿದ್ದಪ್ಪ, ಶಿವಕುಮಾರ್, ಸಿಬ್ಬಂದಿಗಳಾದ ರಂಜಿತ್, ಪ್ರಶಾಂತ್, ಅಕ್ಬರ್, ವಾಸುದೇವ ಚೌಹಾಣ್, ಚಿದಾನಂದ ಕಟೆ ಹಾಗೂ ಎಸಿಬಿ ತಂಡದ ದಯಾನಂದ, ಮುಹಮ್ಮದ್ ಶರೀಫ್, ರೆಜಿ, ಮಹೇಶ್, ಇಕ್ಬಾಲ್ ಪಾಲ್ಗೊಂಡಿದ್ದರು.