×
Ad

ಆರೋಗ್ಯ, ವೈದ್ಯಕೀಯ ಶಿಕ್ಷಣ, ಒಳಾಡಳಿತ, ಕಂದಾಯ ಇಲಾಖೆಗಳ ಅಧಿಕಾರಿ/ಸಿಬ್ಬಂದಿ ಹಾಜರಾತಿ ಕಡ್ಡಾಯ

Update: 2021-04-27 17:16 IST

ಬೆಂಗಳೂರು, ಎ. 27: ಕೋವಿಡ್ ಎರಡನೆ ಅಲೆ ನಿಯಂತ್ರಣಕ್ಕೆ ಹೇರಿರುವ ಕೊರೋನ ಕಫ್ರ್ಯೂ ಹಿನ್ನೆಲೆಯಲ್ಲಿ ಸಚಿವಾಲಯದಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಆರೋಗ್ಯ, ವೈದ್ಯಕೀಯ ಶಿಕ್ಷಣ, ಒಳಾಡಳಿತ ಹಾಗೂ ಕಂದಾಯ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಆಹಾರ, ಇಂಧನ, ಆಡಳಿತ ಸುಧಾರಣೆ, ಆರ್ಥಿಕ, ಪಶು ಸಂಗೋಪನೆ, ಕೃಷಿ, ಕಾರ್ಮಿಕ ತೋಟಗಾರಿಕೆ, ವಾಣಿಜ್ಯ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಶೇ.50ರಂತೆ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ಸೂಚಿಸಲಾಗಿದೆ. ಉಳಿದ ಇತರೆ ಇಲಾಖೆ ಅಧಿಕಾರಿ/ನೌಕರರಿಗೆ ಕಚೇರಿ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಹೀಗೆ ಹಾಜರಾತಿ ನೀಡಲ್ಪಟ್ಟ ಇಲಾಖೆ ಕಾರ್ಯದರ್ಶಿಯವರು/ ಇಲಾಖೆ ಮುಖ್ಯಸ್ಥರು ಇಚ್ಛಿಸಿದಲ್ಲಿ ಅವರು ಬಯಸುವಂತಹ ಅಧಿಕಾರಿ/ನೌಕರರು ಯಾವುದೇ ಕಾರಣ ನೀಡದೆ ಕಚೇರಿಗೆ ಹಾಜರಾಗತಕ್ಕದ್ದು.

ಕಚೇರಿಗೆ ಹಾಜರಾಗತಕ್ಕ ಅಧಿಕಾರಿ/ನೌಕರರಿಗೆ ಸಾಧ್ಯವಾದಷ್ಟು ಸರಕಾರಿ ವಾಹನಗಳನ್ನು ಸಾಧ್ಯವಾದಷ್ಟು ಒದಗಿಸತಕ್ಕದ್ದು. ಮೇಲ್ಕಾಣಿಸಿದ ಇಲಾಖೆಗಳ ಉಳಿದ ಎಲ್ಲ ಅಧಿಕಾರಿ/ನೌಕರರು ಕೇಂದ್ರ ಸ್ಥಾನದಲ್ಲಿ ಲಭ್ಯವಿರುವುದು ಹಾಗೂ ಕೋವಿಡ್ ಕರ್ತವ್ಯಕ್ಕಾಗಿ ನಿಯೋಜಿಸಿದಲ್ಲಿ ತಪ್ಪದೆ ಹಾಜರಾಗಿ ಕರ್ತವ್ಯ ನಿರ್ವಹಿಸತಕ್ಕದ್ದು. ದೃಷ್ಟಿಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ಕಚೇರಿ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಮೇ 12ರ ವರೆಗೆ ಈ ಸುತ್ತೋಲೆ ಅಸ್ತಿತ್ವದಲ್ಲಿರಲಿದೆ ಎಂದು ರವಿಕುಮಾರ್ ಸುತ್ತೋಲೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News