×
Ad

ಈ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭ ಮೌನ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

Update: 2021-04-27 18:08 IST

ಹೊಸದಿಲ್ಲಿ:  ಪ್ರಸಕ್ತ ಕೋವಿಡ್ ಬಿಕ್ಕಟ್ಟಿನ ಸಂದರ್ಭ ಎದುರಾಗಿರುವ ಆಕ್ಸಿಜನ್, ಔಷಧಿ, ಲಸಿಕೆ ಮತ್ತಿತರ ಪೂರೈಕೆಗಳ ಕೊರತೆ ಕುರಿತ ವಿಚಾರವನ್ನು ತಾನು ಕೈಗೆತ್ತಿಕೊಳ್ಳುವ  ಹಿಂದೆ ವಿವಿಧ ರಾಜ್ಯಗಳಲ್ಲಿ ಹೈಕೋರ್ಟ್‍ಗಳು ಈ ವಿಚಾರವನ್ನು ಕೈಗೆತ್ತಿಕೊಳ್ಳುವುದನ್ನು ತಡೆಯುವ ಉದ್ದೇಶ ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮತ್ತೆ ಸ್ಪಷ್ಟ ಪಡಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಮೌನ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲದೇ ಇರುವುದರಿಂದ ತನ್ನಿಂದಾದಷ್ಟು ಪೂರಕ ಯತ್ನಗಳನ್ನು ನಡೆಸುವ ಇಂಗಿತವಿದೆ ಎಂದು ನ್ಯಾಯಾಲಯ ಹೇಳಿದೆ.

"ಸುಪ್ರೀಂ ಕೋರ್ಟ್ ನಿಭಾಯಿಸಬೇಕಾದ ಕೆಲ ರಾಷ್ಟ್ರೀಯ ವಿಚಾರಗಳಿವೆ. ಆದರೆ ಇಂತಹ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭ ಸುಪ್ರೀಂ ಕೋರ್ಟ್ ಮೌನ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ಹೈಕೋರ್ಟ್‍ಗಳು ವಿಚಾರಣೆ ನಡೆಸುವುದನ್ನು ನಾವು ತಡೆಯುತ್ತಿಲ್ಲ, ನಾವು ಕೇವಲ ಪೂರಕ ಪಾತ್ರವನ್ನಷ್ಟೇ ನಿಭಾಯಿಸುತ್ತಿದ್ದೇವೆ.  ಸಮಸ್ಯೆಯನ್ನು ನಿಭಾಯಿಸಲು ಹೈಕೋರ್ಟ್ ಗಳಿಗೆ ಯಾವುದೇ ಸಮಸ್ಯೆಯಿದ್ದರೂ ನಾವು ಸಹಾಯ ಮಾಡುತ್ತೇವೆ" ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ಎನ್ ರಾವ್ ಹಾಗೂ ರವೀಂದ್ರ ಎಸ್ ಭಟ್ ಅವರ ಪೀಠ ಹೇಳಿದೆ.

ಆಕ್ಸಿಜನ್ ಪೂರೈಕೆ, ರಾಜ್ಯಗಳ ಅಗತ್ಯತೆಗಳು, ಅದನ್ನು ನಿಭಾಯಿಸಲು ಕೈಗೊಂಡ ಕ್ರಮ,  ಬೆಡ್, ಅಗತ್ಯ ಔಷಧಿ, ಲಸಿಕೆ ಲಭ್ಯತೆ ಹಾಗೂ ದರಗಳ ಕುರಿತು ಮಾಹಿತಿಗಳನ್ನು ನೀಡುವಂತೆ ಇಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಪ್ರಕರಣದ ವಿಚಾರಣೆ ಮತ್ತೆ ಶುಕ್ರವಾರ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News