ಉಡುಪಿ ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ಗಳ ನಿರ್ಮಾಣ: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಎ.27: ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಎ.27ರಿಂದ ಮೇ 12 ರವರೆಗೆ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಅನಗತ್ಯ ವಾಹನ ಸಂಚಾರವನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಮಣಿಪಾಲದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್ ಮಾರ್ಗಸೂಚಿ ಅನುಷ್ಠಾನ ಕುರಿತ ಅಧಿಕಾರಿಗಳ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಗಡಿಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆದು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ. ವೈದ್ಯಕೀಯ ಕಾರಣಗಳಿಂದ ಮತ್ತು ಸೂಕ್ತ ಪಾಸ್‌ಗಳನ್ನು ಪಡೆದು ಬರುವವರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಪ್ರವೇಶಿಸಲು ಅವಕಾಶ ನೀಡಿ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಬೆಳಗ್ಗೆ 6 ರಿಂದ 10 ವರೆಗೆ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಖರೀದಿ ಸಂದರ್ಭದಲ್ಲಿ ಸುರಕ್ಷತಾ ಅಂತರ ಕಾಯ್ದುಕೊಳ್ಳಲು ಎಲ್ಲಾ ಅಂಗಡಿಗಳ ಮುಂದೆ ಮಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಈ ಕುರಿತಂತೆ ಅಧಿಕಾರಿಗಳು ಪರಿಶೀಲಿಸಬೇಕು. ಬೆಳಗ್ಗೆ 10 ಗಂಟೆಯ ನಂತರವೂ ಅನಾವಶ್ಯಕವಾಗಿ ತೆರೆದಿರುವ ಅಂಗಡಿಗಳ ಲೈಸೆನ್ಸ್‌ಗಳನ್ನು ಕೋವಿಡ್ ಮುಗಿಯುವವರೆಗೂ ಅಮಾನತು ಮಾಡಿ ಎಂದು ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಅವರು ಸ್ಪಷ್ಟ ಸೂಚನೆ ನೀಡಿದರು.
ಸೂಕ್ತ ಅನುಮತಿಯೊಂದಿಗೆ ಜಿಲ್ಲೆಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಅವಕಾಶ ನೀಡಲಾಗುವುದು ಹಾಗೂ ರಕ್ತದಾನ ಮಾಡಲು ತೆರಳುವವರಿಗೆ ಸಂಚರಿಸಲು ಅವಕಾಶ ನೀಡಲಾಗುವುದು ಎಂದರು.
ಕ್ರಿಮಿನಲ್ ಮೊಕದ್ದಮೆ: ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ಮತ್ತು ಹೋಂ ಕ್ವಾರಂಟೈನ್‌ನಲ್ಲಿರುವವನ್ನು ನಿಯಮಿತವಾಗಿ ಭೇಟಿ ಮಾಡಿ ವರದಿ ನೀಡಬೇಕು. ಇದರಲ್ಲಿ ಶೇ.100ರಷ್ಟು ಸಾಧನೆ ಆಗಬೇಕು. ಪಾಸಿಟಿವ್ ಇದ್ದು, ಹೋಂ ಐಸೋಲೇಷನ್‌ನಿಂದ ಹೊರಬರುವವರು ಮತ್ತು ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಂಚರಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
ಕೋವಿಡ್ ಪ್ರಕರಣಗಳು ಕಂಡು ಬಂದಲ್ಲಿ ಕಂಟೈನ್ಮೆಂಟ್ ರೆನ್ ಮತ್ತು ಮೈಕ್ರೋ ಕಂಟೈನ್ಮೆಂಟ್ ರೆನ್‌ಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಡಿಸಿ, ಜಿಲ್ಲೆಯಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಿ ಸೋಂಕಿತರನ್ನು ಬೇಗ ಪತ್ತೆಹಚ್ಚಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಎಲ್ಲಾ ಸಾರ್ವಜನಿಕರು ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸುವುದು ಹಾಗೂ ಸುರಕ್ಷತಾ ಅಂತರ ಪಾಲನೆ ಮಾಡುವುದು ಕಡ್ಡಾಯವಾಗಿದ್ದು, ಈ ನಿಯಮ ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲಾಗುವುದು. ಕೋವಿಡ್ ನಿಯಂತ್ರಣಕ್ಕೆ ರಚಿಸಲಾಗಿರುವ ಎಲ್ಲಾ ಪ್ಲೈಯಿಂಗ್ ಸ್ಕ್ವಾಡ್‌ಗಳು ಹಾಗೂ ವಿವಿಧ ಅಧಿಕಾರಿಗಳ ನೇತೃತ್ವದ ಕಾರ್ಯತಂಡಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಡಿಸಿ ಸೂಚಿಸಿದರು.
ಈ ಹಿಂದೆ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತವು ಇಡೀ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸಿತ್ತು. ಈ ಬಾರಿಯೂ ಕೂಡಾ ಎಲ್ಲಾ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಸಾರ್ವಜನಿಕರೂ ಸಹ ಸರಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿ.ಜಗದೀಶ್ ತಿಳಿಸಿದರು.
ಕೋವಿಡ್ ಕೇರ್ ಸೆಂಟರ್
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತದಿಂದ ಉಲ್ಲೇಖಿಸಲ್ಪಡುವ (ರೆಫರ್) ಕೋವಿಡ್ ಸೋಂಕಿತರಿಗೆ ಶೇ.75ರಷ್ಟು ಬೆಡ್‌ಗಳನ್ನು ಮೀಸಲಿಡುವ ಕುರಿತಂತೆ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿ. ಹೋಂ ಐಸೋಲೇಷನ್‌ನಲ್ಲಿ ಇರಲು ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವವರಿಗೆ ಹೋಂ ಕೇರ್ ಸೆಂಟರ್ ತೆರೆಯುವ ಬಗ್ಗೆ ಕ್ರಮ ಕೈಗೊಳ್ಳಿ. ಮುಂಜಾಗ್ರತೆಯಾಗಿ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳು ಲಭ್ಯವಿರುವ ರೀತಿ ವ್ಯವಸ್ಥೆಗಳನ್ನು ಮಾಡಿಕೊಳ್ಳಿ.