ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿ
ಉಡುಪಿ, ಎ.27: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹಿಂಗಾರು ಋತುವಿನಲ್ಲಿ ರೈತರು ಬೆಳೆದಿರುವ ಭತ್ತ ಸಂಗ್ರಹಣೆಗೆ ಈಗಾಗಲೇ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ತಂತ್ರಾಂಶದಿಂದ ರೈತರ ಮಾಹಿತಿಯನ್ನು ಪಡೆದು ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರಕಾರ ನಿಗದಿಪಡಿಸಿರುವ 0.12 ಲಕ್ಷ ಮೆ.ಟನ್ ಭತ್ತವನ್ನು ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ 1868 ರೂ. ದರದಲ್ಲಿ ಹಾಗೂ ಗ್ರೇಡ್ ಎ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ ರೂ. 1888ರ ದರದಲ್ಲಿ ಹಾಗೂ ಜ್ಯೋತಿ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ ರೂ.1868ರ ದರದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಪ್ರತಿ ಎಕರೆಗೆ 16 ಕ್ವಿಂಟಾಲ್‌ನಂತೆ ಗರಿಷ್ಟ 40 ಕ್ಷಿಂಟಾಲ್ ಭತ್ತವನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಖರೀದಿಸಲು ಜಿಲ್ಲೆಗೆ ಕರ್ನಾಟಕ ಆಹಾರ, ನಾಗರಿಕ ಸರಬರಾಜು ನಿಗಮ ನಿಯಮಿತ ಇವರನ್ನು ಸಂಗ್ರಹಣಾ ಏಜೆನ್ಸಿಯನ್ನಾಗಿ ನೇಮಿಸಿದ್ದು, ಉಡುಪಿ, ಕಾರ್ಕಳ ಹಾಗೂ ಕುಂದಾಪುರ ಎಪಿಎಂಸಿ ಯಾರ್ಡ್‌ನಲ್ಲಿ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಹಿಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗಾಗಿ ರೈತರ ನೋಂದಣಿ ಅವಧಿಯನ್ನು ಮೇ 5 ರವರೆಗೆ ಹಾಗೂ ರೈತರಿಂದ ಭತ್ತ ಖರೀದಿ ಅವಧಿಯನ್ನು ಜೂನ್ 30 ರವರೆಗೆ ನಿಗದಿಪಡಿಸಲಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.