ಮೋದಿ ಕೊರೋನ ವೈರಸ್‌ ನ ಸೂಪರ್‌ ಸ್ಪ್ರೆಡರ್:‌ ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷ ಆಕ್ರೋಶ

Update: 2021-04-27 14:11 GMT

ಹೊಸದಿಲ್ಲಿ.ಎ.27: ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವಜೋತ್ ದಹಿಯಾ ಅವರು ಸಾಂಕ್ರಾಮಿಕದ ಎರಡನೇ ಅಲೆಯ ನಡುವೆಯೇ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳಲ್ಲಿ ರಾಜಕೀಯ ರ್ಯಾಲಿಗಳನ್ನು ನಡೆಸಿದ್ದಕ್ಕಾಗಿ ಮತ್ತು ಹರಿದ್ವಾರದಲ್ಲಿ ಕುಂಭಮೇಳ ನಡೆಯಲು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಸೂಪರ್ ಸ್ಪ್ರೆಡರ್’ಎಂದು ಬಣ್ಣಿಸುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಜನರಿಗೆ ಕಡ್ಡಾಯ ಕೋವಿಡ್-19 ನಿಯಮಗಳನ್ನು ಅರ್ಥಮಾಡಿಸಲು ವೈದ್ಯಕೀಯ ಸಮುದಾಯವು ಶ್ರಮಿಸುತ್ತಿದ್ದರೆ ಮೋದಿಯವರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ರಾಜಕೀಯ ರ್ಯಾಲಿಗಳನ್ನುದ್ದೇಶಿಸಿ ಭಾಷಣ ಮಾಡಲು ಹಿಂಜರಿಯಲಿಲ್ಲ ಎಂದು ದಹಿಯಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

2020,ಜನವರಿಯಲ್ಲಿ ದೇಶದಲ್ಲಿ ಮೊದಲ ಕೊರೋನವೈರಸ್ ರೋಗಿ ಪತ್ತೆಯಾದ ಸಂದರ್ಭದಲ್ಲಿ ಸೋಂಕನ್ನು ನಿಯಂತ್ರಿಸಲು ವ್ಯವಸ್ಥೆ ಮಾಡುವ ಬದಲು ಮೋದಿಯವರು ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ವಾಗತಕ್ಕಾಗಿ ಗುಜರಾತಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿದ್ದ ಸಮಾವೇಶಗಳನ್ನು ಏರ್ಪಡಿಸಿದ್ದರು ಎಂದಿರುವ ದಹಿಯಾ,ಈಗ ಕೋವಿಡ್-19 ಎರಡನೇ ಅಲೆಯು ಇನ್ನಷ್ಟೇ ತನ್ನ ಉತ್ತುಂಗಕ್ಕೇರಬೇಕಿರುವಾಗ ಇಡೀ ಆರೋಗ್ಯ ವ್ಯವಸ್ಥೆ ವಿಫಲಗೊಳ್ಳುತ್ತಿದೆ. ಅದನ್ನು ಬಲಗೊಳಿಸಲು ಮೋದಿ ಇಡೀ ಒಂದು ವರ್ಷದಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದಿದ್ದಾರೆ.

ಹಲವಾರು ಕೋವಿಡ್-19 ರೋಗಿಗಳ ಸಾವುಗಳಿಗೆ ಆಮ್ಲಜನಕದ ಕೊರತೆ ಕಾರಣವಾಗಿದೆ ಎಂದು ಬೆಟ್ಟು ಮಾಡಿರುವ ಅವರು,ಆಮ್ಲಜನಕ ಸ್ಥಾವರ ನಿರ್ಮಾಣದ ಹಲವಾರು ಯೋಜನೆಗಳು ಅನುಮತಿಗಾಗಿ ಈಗಲೂ ಕೇಂದ್ರ ಸರಕಾರದ ಬಳಿ ಬಾಕಿಯಾಗಿವೆ ಮತ್ತು ಇಂತಹ ಮಹತ್ವದ ಅಗತ್ಯಕ್ಕೆ ಮೋದಿ ಸರಕಾರವು ಪ್ರಾಧಾನ್ಯವನ್ನೇ ನೀಡಲಿಲ್ಲ ಎಂದಿದ್ದಾರೆ.

ಕೃಷಿಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ವಿಷಯದಲ್ಲಿಯೂ ಮೋದಿ ಯಾವುದೇ ಹೊಣೆಗಾರಿಕೆಯನ್ನು ಪ್ರದರ್ಶಿಸಲಿಲ್ಲ ಮತ್ತು ದಿಲ್ಲಿಯ ಗಡಿಗಳಲ್ಲಿ ರೈತರ ಬೃಹತ್ ಜಮಾವಣೆಗೆ ಅವಕಾಶ ನೀಡಿರುವುದು ಸಾಂಕ್ರಾಮಿಕವು ಹರಡುವ ಗಂಭೀರ ಬೆದರಿಕೆಯನ್ನೊಡ್ಡಿದೆ ಎಂದಿದ್ದಾರೆ.
 
ಕೋವಿಡ್-19ಕ್ಕೆ ಮೊದಲ ಪುರಾವೆ ಆಧಾರಿತ ಔಷಧಿ ಎಂದು ಪತಂಜಲಿ ಆಯುರ್ವೇದ ಸಂಸ್ಥೆಯು ಹೇಳಿಕೊಂಡಿದ್ದ ಯೋಗಗುರು ರಾಮದೇವ್ ಅವರ ಕೊರೊನಿಲ್ ಅನ್ನು ಬೆಂಬಲಿಸಿದ್ದಕ್ಕಾಗಿಯೂ ಮೋದಿಯವರನ್ನು ಟೀಕಿಸಿರುವ ದಹಿಯಾ,ಕೊರೊನಿಲ್ನಂತಹ ಯಾವುದೇ ಸಾಂಪ್ರದಾಯಿಕ ಔಷಧಿಯನ್ನು ತಾನು ಪುನರ್ಪರಿಶೀಲಿಸಿಲ್ಲ ಅಥವಾ ಪರಿಣಾಮಕಾರಿತ್ವವನ್ನು ಪ್ರಮಾಣಿಸಿಯೂ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸ್ಪಷ್ಟನೆ ನೀಡಬೇಕಾಗಿ ಬಂದಿತ್ತು ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ತಂಡವೊಂದು ತನ್ನ ಕಂಪನಿಗೆ ಭೇಟಿ ನೀಡಿತ್ತು ಮತ್ತು 150ಕ್ಕೂ ಅಧಿಕ ದೇಶಗಳಲ್ಲಿ ಕೊರೊನಿಲ್ ಮಾರಾಟಕ್ಕೆ ಪರವಾನಿಗೆಯನ್ನು ನೀಡಿದೆ ಎಂದು ರಾಮದೇವ್ ಆಗ ಹೇಳಿಕೊಂಡಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News