×
Ad

‘ವಾರ್ತಾಭಾರತಿ’ಯ ಪುಷ್ಪರಾಜ್, ಇಬ್ರಾಹೀಂ ಅಡ್ಕಸ್ಥಳ, ಸತ್ಯಾ ಕೆ. ಸೇರಿ 15 ಮಂದಿ ಆಯ್ಕೆ

Update: 2021-04-27 20:22 IST

ಮಂಗಳೂರು, ಎ.27: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಮಂಗಳವಾರ ನಗರದ ಪತ್ರಿಕಾಭವನದಲ್ಲಿ ನಡೆದಿದ್ದು, ‘ವಾರ್ತಾಭಾರತಿ’ಯ ಪುಷ್ಪರಾಜ್ ಬಿ.ಎನ್., ಇಬ್ರಾಹೀಂ ಅಡ್ಕಸ್ಥಳ ಮತ್ತು ಸತ್ಯಾ ಕೆ. ಸೇರಿದಂತೆ ಒಟ್ಟು 15 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಒಟ್ಟು 15 ಸ್ಥಾನಗಳಲ್ಲಿ 9 ಸಾಮಾನ್ಯ ಸ್ಥಾನವಿದ್ದು, 12 ಮಂದಿ ಕಣದಲ್ಲಿ ಉಳಿದಿದ್ದರು. ಸಾಮಾನ್ಯ ಸ್ಥಾನದಲ್ಲಿ ಶ್ರೀನಿವಾಸ ನಾಯಕ್ ಇಂದಾಜೆ, ಆತ್ಮಭೂಷಣ್ ಭಟ್, ಇಬ್ರಾಹೀಂ ಅಡ್ಕಸ್ಥಳ, ಜಿತೇಂದ್ರ ಭಟ್, ಸುಖಪಾಲ್ ಪೊಳಲಿ, ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್., ಕೇಶವ ಕುಂದರ್ ಹಾಗೂ ವಿಲ್ಫ್ರೆಡ್ ಡಿಸೋಜ ಬಹುಮತದಿಂದ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ‘ಎ’ ಮೀಸಲು ಕ್ಷೇತ್ರದಿಂದ 2 ಸ್ಥಾನಕ್ಕೆ ಒಟ್ಟು 7ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ ಮುಹಮ್ಮದ್ ಆರಿಫ್, ವಿಜಯ್ ಕೋಟ್ಯಾನ್ ಪಡು ಆಯ್ಕೆಯಾಗಿದ್ದಾರೆ.

ನಾಲ್ವರು ಅವಿರೋಧ ಆಯ್ಕೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸ್ಥಾನದಲ್ಲಿ ಸುರೇಶ್ ಡಿ.ಪಳ್ಳಿ ಹಾಗೂ ಹರೀಶ್ ಮೋಟುಕಾನ, ಮಹಿಳಾ ಕ್ಷೇತ್ರದಲ್ಲಿ ಸತ್ಯಾ ಕೆ. ಮತ್ತು ಶಿಲ್ಪಾ ಅವಿರೋಧ ಆಯ್ಕೆಯಾಗಿದ್ದಾರೆ.

ಒಟ್ಟು 209 ಶೇರುದಾರರ ಪೈಕಿ 198 ಮಂದಿ ಮತದಾನ ಮಾಡಿದ್ದು, ಶೇ.94.98 ಮತದಾನವಾಗಿತ್ತು. ಶಿವಲಿಂಗಯ್ಯ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ವಾರ್ತಾ ಇಲಾಖೆ ಸಿಬ್ಬಂದಿ ಚುನಾವಣೆಗೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News