ಕೋವಿಡ್ ಕರ್ಫ್ಯೂ ಎಫೆಕ್ಟ್: ಉಡುಪಿ ನಗರದಲ್ಲಿ ಟ್ರಾಫಿಕ್ ಜಾಮ್
ಉಡುಪಿ, ಎ.27: ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇಂದು ರಾತ್ರಿಯಿಂದ ಕೋವಿಡ್ ಕರ್ಫ್ಯೂ ಘೋಷಿಸಿರುವ ಪರಿಣಾಮ ನಗರದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿ ಕೆಲವು ಕಡೆ ಟ್ರಾಫಿಕ್ ಜಾಮ್‌ಗಳು ಕಂಡುಬಂದವು.
ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜನ, ಬೆಳಗ್ಗೆಯಿಂದಲೇ ತಮಗೆ ಬೇಕಾದ ಕೆಲಸ ಕಾರ್ಯಗಳಿಗೆ ನಗರದತ್ತ ದಾವಿಸಿ ಬರುತ್ತಿರುವುದು ಕಂಡುಬಂತು. ಇದರಿಂದ ನಗರದ ಕೆಎಂ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣದ ಬಳಿಯ ರಸ್ತೆ ಹಾಗೂ ಕಲ್ಸಂಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಅದೇ ರೀತಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಹೊರಡುವ ಪ್ರಯಾಣಿಕರ ಸಂಖ್ಯೆ ಅಧಿಕ ಇದ್ದುದರಿಂದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಬೆಳಗ್ಗೆ ಹೆಚ್ಚುವರಿಯಾಗಿ ಹಲವು ಬಸ್‌ಗಳು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸಂಚರಿಸಿದವು. ಹೀಗಾಗಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿಕೊಂಡಿದ್ದವು.
ಬೆಂಗಳೂರಿನಿಂದ ಹೊರಟ ಸಾಕಷ್ಟು ಖಾಸಗಿ ಹಾಗೂ ಸರಕಾರಿ ಬಸ್‌ಗಳು ಇಂದು ಬೆಳಗ್ಗೆ ಉಡುಪಿ ಮತ್ತು ಕುಂದಾಪುರ ತಲುಪಿದೆ. ಹೆಚ್ಚಿನ ಸಂಖ್ಯೆಯ ಕರಾವಳಿಗರು ಬೆಂಗಳೂರಿನಿಂದ ಉಡುಪಿಗೆ ಆಗಮಿಸಿದ್ದಾರೆ. ಅದೇ ರೀತಿ ಇಂದು ಬೆಳಗ್ಗೆ ಕೂಡ ಹೆಚ್ಚುವರಿ ಖಾಸಗಿ ಮತ್ತು ಸರಕಾರಿ ಬಸ್‌ಗಳು ಬೆಂಗಳೂರಿಗೆ ಹೊರಟಿದೆ. ಖಾಸಗಿ ಬಸ್‌ಗಳಲ್ಲಿ ಮಾಮೂಲಿಗಿಂತ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿವೆ.
ಸಗಟು ದಿನಸಿ ಅಂಗಡಿಗಳಲ್ಲಿ ಗ್ರಾಮೀಣ ಪ್ರದೇಶಗಳ ಅಂಗಡಿಯವರು ದಿನಸಿ ಸಾಮಾಗ್ರಿಗಳನ್ನು ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದವು. ಇದ ರಿಂದ ತೆಂಕಪೇಟೆಯಲ್ಲಿನ ಅಂಗಡಿಗಳಲ್ಲಿ ಜನ ತುಂಬಿ ಹೋಗಿದ್ದರು. ದಿನಸಿ ಅಂಗಡಿಗಳಲ್ಲೂ ಜನ ಸರತಿ ಸಾಲಿನಲ್ಲಿ ನಿಂತು ಸಾಮಾನುಗಳನ್ನು ಖರೀದಿಸಿದರು. ಲಾಕ್‌ಡೌನ್ ಎದುರಿಸಲು ಎಲ್ಲರೂ ಈಗಲೇ ಅಣಿಾಗುತ್ತಿರುವುದು ಕಂಡುಬರುತ್ತಿದೆ.
ಮುಂದುವರೆದ ಕಾರ್ಮಿಕರ ವಲಸೆ
ತಮ್ಮ ಊರಿಗೆ ವಲಸೆ ಹೋಗುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಿಂದ ಹುಬ್ಬಳ್ಳಿ- ಬಿಜಾಪುರ ಮಾರ್ಗವಾಗಿ ಇಂದು ಬೆಳಗ್ಗೆಯಿಂದ ಒಟ್ಟು 13 ಬಸ್‌ಗಳು ಪ್ರಯಾಣ ಬೆಳೆಸಿವೆ.
ಹುಬ್ಬಳ್ಳಿ, ಬಾಗಲೋಟೆ, ಕುಷ್ಟಗಿ, ರೋಣ, ಬಿಜಾಪುರ ಮಾರ್ಗವಾಗಿ ಉಡುಪಿ ಡಿಪೋದಿಂದ 13 ಬಸ್‌ಗಳು ಹೊರಟಿವೆ. ಬೆಂಗಳೂರಿಗೆ ಬೆಳಗ್ಗೆ ಕುಂದಾಪುರ ಮತ್ತು ಉಡುಪಿ ಡಿಪೋದಿಂದ ಒಟ್ಟು ಎಂಟು ಹೆಚ್ಚುವರಿ ಬಸ್ ಗಳು ಹೊರಟಿವೆ ಎಂದು ಉಡುಪಿ ಡಿಪೋ ವ್ಯವ್ಥಾಪಕ ಉದಯ ಕುಮಾರ್ ತಿಳಿಸಿದ್ದಾರೆ.