ಉಡುಪಿ: ಕೋವಿಡ್ ಪಾಸಿಟಿವ್ ಪ್ರಕರಣದಲ್ಲಿ ಮತ್ತೆ ದಾಖಲೆ
ಉಡುಪಿ, ಎ.27: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್-19 ಇತಿಹಾಸದಲ್ಲೇ ಅತ್ಯಧಿಕ 477 ಮಂದಿ ಪಾಸಿಟಿವ್ ಬಂದಿದ್ದಾರೆ. ಕಳೆದ ಎ.21ರಂದು 471 ಮಂದಿ ಪಾಸಿಟಿವ್ ಬಂದಿದ್ದು, ಇದುವರೆಗಿನ ದಾಖಲೆಯಾಗಿತ್ತು. ದಿನದಲ್ಲಿ 272 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ ಇದೀಗ 1892ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 477 ಮಂದಿಯಲ್ಲಿ 266 ಮಂದಿ ಪುರುಷರಾದರೆ, 211 ಮಂದಿ ಮಹಿಳೆಯರು. ಇವರಲ್ಲಿ 263 ಮಂದಿ ಉಡುಪಿ ತಾಲೂಕಿನವರು. ಉಳಿದಂತೆ 128 ಮಂದಿ ಕುಂದಾಪುರ ಹಾಗೂ 82 ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಯಿಂದ ಬಂದ ನಾಲ್ವರು ಸಹ ಇಂದು ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಇಂದು ಮಣಿಪಾಲ ಕೆಎಂಸಿಯಲ್ಲಿ ಐವರು ಪಾಸಿಟಿವ್ ಬಂದಿದ್ದರೆ, ಕಾರ್ಕಳ ಕುಕ್ಕಂದೂರಿನ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 12 ಮಂದಿ ವಿದ್ಯಾರ್ಥಿಗಳು ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. 100ಕ್ಕೂ ಅಧಿಕ ಮಂದಿ ಸೋಂಕಿತರು ಈಗಾಗಲೇ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂದು ಡಾ.ಸೂಡ ಹೇಳಿದರು.
ಸೋಮವಾರ 272 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 27,564ಕ್ಕೇರಿದೆ. ನಿನ್ನೆ ಜಿಲ್ಲೆಯ 3772 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 477 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 29,650 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,94,899 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಮಂಗಳವಾರ ಅಧಿಕೃತವಾಗಿ ಕೊರೋನದಿಂದ ಯಾರೂ ಮೃತಪಟ್ಟಿಲ್ಲ. ಈವರೆಗೆ ಕೊರೋನದಿಂದ ಮೃತಪಟ್ಟವರ ಸಂಖ್ಯೆ 194 ಆಗಿದೆ.