ಕಟ್ಟಡ ಕಾರ್ಮಿಕರ ದುಡಿಮೆಗೆ ಅನುವು ಮಾಡಿಕೊಡುವಂತೆ ಮನವಿ
ಕುಂದಾಪುರ, ಎ.27: ಕಟ್ಟಡ ನಿರ್ಮಾಣ ಕಾರ್ಮಿಕರು ಬೆಳಗ್ಗೆ ಕೆಲಸಕ್ಕೆ ಹೊರಟು ಸಂಜೆ ಕೆಲಸದಿಂದ ಮನೆ ಸೇರಲು ಪೊಲೀಸ್ ಇಲಾಖೆಯು ಕಾರ್ಮಿಕರ ಗುರುತು ಚೀಟಿ ಪರಿಶೀಲಿಸಿ ದುಡಿಮೆಗೆ ಅನುವು ಮಾಡಿಕೊಡ ಬೇಕು ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಇಂದು ಕುಂದಾಪುರ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದೆ.
ದಿನಗೂಲಿ ಕಾರ್ಮಿಕರಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ರಾಜ್ಯ ಸರಕಾರವು 14 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಕೆಲಸ ಮಾಡಲು ಅನುಮತಿ ನೀಡಿದೆ. ದುಡಿಮೆಯನ್ನೇ ನಂಬಿ ಕುಟುಂಬ ನಿರ್ವಹಣೆಗೆ ವಿವಿಧ ಸಂಘ ಸಂಸ್ಥೆ, ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಪ್ರತಿ ವಾರ, ತಿಂಗಳು ಸಾಲ ಮರುಪಾವತಿ ಮಾಡುವವರಿದ್ದಾರೆ. ಕೆಲವರು ಬಾಡಿಗೆ ಮನೆಯಲ್ಲಿದ್ದು ಅನಾ ರೋಗ್ಯಪೀಡಿತ ತಂದೆ ತಾಯಿ ಹಾರೈಕೆಯ ಜವಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆಲವು ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆಂದು ಮನವಿಯಲ್ಲಿ ತಿಳಿಸಲಾಗಿದೆ.
ಕುಂದಾಪುರ ತಾಲೂಕಿನ ವಿವಿದೆಡೆಯಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದು ಕಾರ್ಮಿಕರು ಈ ಅವಧಿಯಲ್ಲಿ ಬೆಳಿಗ್ಗೆ 7.30 ಗಂಟೆಯಿಂದ ಕೆಲಸದ ಪ್ರದೇಶಗಳಿಗೆ ಕಾರ್ಮಿಕ ಇಲಾಖೆ ನೀಡಿರುವ ಕಟ್ಟಡ ಕಾರ್ಮಿಕರ ಗುರುತು ಚೀಟಿಯೊಂದಿಗೆ ಹೊರಟು, ಸಂಜೆ 5.30ಗಂಟೆಗೆ ಕೆಲಸದಿಂದ ಮನೆ ಸೇರಲು ಪೊಲೀಸ್ ಇಲಾಖೆಯು ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ಸಂಘದ ಅಧ್ಯಕ್ಷ ಯು.ದಾಸಭಂಡಾರಿ ಹಾಗೂ ಪ್ರಧಾನ ಕಾರ್ಯ ದರ್ಶಿ ಸುರೇಶ್ ಕಲ್ಲಾಗರ ಒತ್ತಾಯಿಸಿದ್ದಾರೆ.