ಇಸ್ರೇಲ್‌ ನಿಂದ ಫೆಲೆಸ್ತೀನೀಯರ ವಿರುದ್ಧ ವರ್ಣಭೇದ, ದಮನ ನೀತಿ: ವರದಿ

Update: 2021-04-27 17:11 GMT

ಲಂಡನ್, ಎ. 27: ಇಸ್ರೇಲ್, ಫೆಲೆಸ್ತೀನೀಯರ ವಿರುದ್ಧ ವರ್ಣಭೇದ ನೀತಿಯನ್ನು ಅನುಸರಿಸುತ್ತಿದೆ ಹಾಗೂ ಅವರನ್ನು ದಮನಿಸುತ್ತಿದೆ. ಇದು ಮಾನವತೆಯ ವಿರುದ್ಧ ಅದು ಎಸಗುತ್ತಿರುವ ಅಪರಾಧವಾಗಿದೆ ಎಂದು ಅಂತರ್ ರಾಷ್ಟ್ರೀಯ ಮಾನವಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.

ಈ ಹಿನ್ನೆಲೆಯಲ್ಲಿ, ಅಂತರ್ ರಾಷ್ಟ್ರೀಯ ಸಮುದಾಯವು ಇಸ್ರೇಲ್‌ ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ತನ್ನ 213 ಪುಟಗಳ ವರದಿಯಲ್ಲಿ ಅದು ಹೇಳಿದೆ.

ಜೋರ್ಡಾನ್ ನದಿಯಿಂದ ಮೆಡಿಟರೇನಿಯನ್ ಸಮುದ್ರದವರೆಗೆ ಫೆಲೆಸ್ತೀನ್ ಜನರ ಮೇಲೆ ಯಹೂದಿ-ಇಸ್ರೇಲಿ ಪ್ರಾಬಲ್ಯವನ್ನು ಇಸ್ರೇಲ್ ಹೇಗೆ ಸ್ಥಾಪಿಸುತ್ತಿದೆ ಎನ್ನುವ ವಿವರಗಳನ್ನು ವರದಿ ನೀಡುತ್ತದೆ.

‘‘ಫೆಲೆಸ್ತೀನ್ ಭೂಭಾಗಗಳ ಮೇಲಿನ ಇಸ್ರೇಲ್ನ ಅರ್ಧ ಶತಮಾನದ ಅತಿಕ್ರಮಣವು ತಾತ್ಕಾಲಿಕ ಹಾಗೂ ದಶಕಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ಶಾಂತಿ ಪ್ರಕ್ರಿಯೆಯು ಅದನ್ನು ಇತ್ಯರ್ಥಪಡಿಸುತ್ತದೆ ಎಂಬುದಾಗಿ ಜಗತ್ತಿನ ಹೆಚ್ಚಿನ ಭಾಗ ಭಾವಿಸಿದೆ. ಇದೇ ಅವಧಿಯಲ್ಲಿ ಅಲ್ಲಿ ಫೆಲೆಸ್ತೀನೀಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯು ಎಲ್ಲ ಎಲ್ಲೆಗಳನ್ನು ಮೀರಿ ಖಾಯಂ ಆಗಿದೆ. ಇದು ವರ್ಣಭೇದ ನೀತಿ ಮತ್ತು ಕಿರುಕುಳದ ವ್ಯಾಖ್ಯೆಗಳಿಗೆ ಸರಿಹೊಂದುತ್ತವೆ’’ ಎಂದು ಹ್ಯೂಮನ್ ರೈಟ್ಸ್ ವಾಚ್ ನ ಕಾರ್ಯಕಾರಿ ನಿರ್ದೇಶಕ ಕೆನೆತ್ ರಾತ್ ಹೇಳಿದ್ದಾರೆ.
 
‘‘ಇಸ್ರೇಲ್-ಫೆಲೆಸ್ತೀನ್ ಶಾಂತಿಗಾಗಿ ಪ್ರಯತ್ನಿಸುತ್ತಿರುವವರು ಈ ವಾಸ್ತವಿಕತೆಯನ್ನು ಗಮನಿಸಬೇಕು ಹಾಗೂ ಅದನ್ನು ಕೊನೆಗೊಳಿಸಲು ಅಗತ್ಯವಾದ ಮಾನವಹಕ್ಕುಗಳನ್ನು ಜಾರಿಗೊಳಿಸಬೇಕು’’ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News