ಕೋವಿಡ್ ಕರ್ಫ್ಯೂ: ಪುತ್ತೂರಿನಲ್ಲಿ ಜನಜೀವನ ಅಸ್ತವ್ಯಸ್ತ
ಪುತ್ತೂರು, ಎ.28: ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬುಧವಾರ ಪುತ್ತೂರು ತಾಲೂಕಿನಾದ್ಯಂತ ಬೆಳಗ್ಗೆ 10 ಗಂಟೆಯ ಬಳಿಕ ಎಲ್ಲಾ ವ್ಯಾಪಾರ ಮತ್ತು ವಹಿವಾಟುಗಳ ಸಹಿತ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಬೆಳಗ್ಗೆ 6ರಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಮಂಗಳವಾರವೇ ಹೆಚ್ಚಿನ ಜನರು ಅಗತ್ಯ ವಸ್ತುಗಳನ್ನು ಖರೀದಿಸಿ ಕೊಂಡೊಯ್ದ ಕಾರಣ ಬುಧವಾರ ಅಂಗಡಿಗಳ ಮುಂಭಾಗದಲ್ಲಿ ಜನದಟ್ಟಣೆ ಕಂಡು ಬಂದಿರಲಿಲ್ಲ. ಬಸ್ಸು ಸಂಚಾರ ಇಲ್ಲದ ಕಾರಣ ಗ್ರಾಮಾಂತರ ಪ್ರದೇಶಗಳಿಂದ ಜನರು ನಗರಕ್ಕೆ ಆಗಮಿಸಿಲ್ಲ. ನಗರದಲ್ಲಿ ಹೋಟೆಲ್‌ಗಳು ಬೆಳಗ್ಗೆ 6ರಿಂದ 10ರ ತನಕ ಮಾತ್ರ ತೆರೆದಿದ್ದು, ನಂತರ ಮುಚ್ಚಲ್ಪಟ್ಟಿತು. ಸರಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಮತ್ತಿತರ ಇಲಾಖೆಯ ಕಚೇರಿಗಳು ಎಂದಿನಂತೆ ತೆರೆದಿವೆ.
ನಗರದಲ್ಲಿ ಆಟೋರಿಕ್ಷಾ, ದ್ವಿಚಕ್ರ ವಾಹನ ಸೇರಿದಂತೆ ವಾಹನಗಳ ಓಡಾಟವು ಬೆಳಗ್ಗಿನ ವೇಳೆಯಲ್ಲಿ ವಿರಳವಾಗಿತ್ತು. 10 ಗಂಟೆಯ ಬಳಿಕ ಸಂಪೂರ್ಣ ನಿಲುಗಡೆಯಾಗಿತ್ತು. ಬಳಿಕ ಆಗಮಿಸಿದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿ ಕಳುಹಿಸುತ್ತಿದ್ದರು. 10 ಗಂಟೆಯ ಬಳಿಕ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು. ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಿತ್ತು.