ಕುಂಭ ಮೇಳದ ಅಂತಿಮ ಶಾಹಿ ಸ್ನಾನದ ಮರುದಿನ ಉತ್ತರಾಖಂಡದ ಹರಿದ್ವಾರದಲ್ಲಿ ಕರ್ಫ್ಯೂ
Update: 2021-04-28 11:09 IST
ಡೆಹ್ರೂಡೂನ್: ದೇಶದಲ್ಲಿ ಕಳೆದ ಒಂದು ವಾರದಲ್ಲೇ ಕೋವಿಡ್ ನಿಂದಾಗಿ 17,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರೂ ಸಾವಿರಾರು ಭಕ್ತರು ಕೋವಿಡ್ ಪ್ರೊಟೊಕಾಲ್ ಧಿಕ್ಕರಿಸಿ ಮೆಗಾ ಕುಂಭದ ಅಂತಿಮ ಶಾಹಿಸ್ನಾನದಲ್ಲಿ ಭಾಗಿಯಾದ ಮರುದಿನ ಉತ್ತರಾಖಂಡ ಹರಿದ್ವಾರದಲ್ಲಿ ಬುಧವಾರದಿಂದ ಕರ್ಫ್ಯೂ ಆದೇಶಿಸಲಾಗಿದೆ.
ಕರ್ಫ್ಯೂ ಅವಧಿಯಲ್ಲಿ ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿಸಲಾಗುವುದು. ಕರ್ಫ್ಯೂವನ್ನು ಹರಿದ್ವಾರ, ರೂರ್ಕಿ, ಲಕ್ಸಾರ್ ಹಾಗೂ ಭಗವಾನ್ ಪುರ ನಗರ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಕುಂಭ ಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎ.18ರಂದು ಮನವಿ ಮಾಡಿದ ಬಳಿಕ ಮಂಗಳವಾರ ನಾಲ್ಕರಲ್ಲಿ ಕೊನೆಯ ಶಾಹಿ ಸ್ನಾನವು ನೆರವೇರಿದೆ.
ಉತ್ತರಾಖಂಡದಲ್ಲಿ ಸೋಮವಾರ 5,000ಕ್ಕೂ ಅಧಿಕ ಕೋವಿಡ್-19 ಕೇಸ್ ಗಳು ವರದಿಯಾಗಿದ್ದು, ಇದು ರಾಜ್ಯದಲ್ಲಿ ದಾಖಲಾಗಿರುವ ಗರಿಷ್ಟ ಪ್ರಕರಣವಾಗಿದೆ.