ಮಂಗಳೂರು: ಆರೋಗ್ಯ ಸಿಬ್ಬಂದಿಯ ಸಾಗಾಟದಲ್ಲಿ ಕೋವಿಡ್ ನಿಯಮ ಉಲ್ಲಂಘನೆ; ಒಂದೇ ಬಸ್ಸಿನಲ್ಲಿ 40ಕ್ಕೂ ಅಧಿಕ ಮಂದಿ
ಮಂಗಳೂರು, ಎ. 28: ಕೋವಿಡ್ ಯೋಧರುಗಳಾಗಿ ಆರಂಭದಿಂದಲೂ ಮುಂಚೂಣಿಯಲ್ಲಿರುವ ನರ್ಸ್‌ಗಳು, ಆರೋಗ್ಯ ಸಿಬ್ಬಂದಿ ಬಗ್ಗೆ ಕಾಳಜಿ ವಹಿಸುವಲ್ಲಿ ದ.ಕ. ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಂದು ವೆನ್‌ಲಾಕ್ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆತರಲು ಸರಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಸುಮಾರು 9:50ರ ವೇಳೆಗೆ ವೆನ್‌ಲಾಕ್ ಆಸ್ಪತ್ರೆಯ ಬಾಗಿಲ ಬಳಿ ಸಿಬ್ಬಂದಿಯನ್ನು ಹೊತ್ತು ತಂದ ಕೆಎಸ್ಸಾರ್ಟಿಸಿ ಬಸ್ಸಿನಿಂದ 40ಕ್ಕೂ ಅಧಿಕ ಸಿಬ್ಬಂದಿ ಇಳಿದರು!
ಲಾಕ್‌ಡೌನ್ ಹಾಗೂ ಕೊರೋನ ಮಾರ್ಗಸೂಚಿಯ ಅನ್ವಯ ಖಾಸಗಿ ಬಸ್ಸುಗಳು ಸೇರಿದಂತೆ ಸರಕಾರಿ ಬಸ್ಸುಗಳಲ್ಲಿ 20ಕ್ಕಿಂತ ಅಧಿಕ ಪ್ರಯಾಣಿಕರನ್ನು ಸಾಗಿಸುವಂತಿಲ್ಲ. ಅದರಲ್ಲೂ ಇವರು ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ವೆನ್‌ಲಾಕ್ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು, ಒಂದೇ ಬಸ್ಸಿನಲ್ಲಿ 40ಕ್ಕೂ ಅಧಿಕ ಮಂದಿಯನ್ನು ಹೇರಿಕೊಂಡು ಬಂದಿರುವುದು ಅಚ್ಚರಿಗೆ ಕಾರಣವಾಗಿತ್ತು. ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಿಬ್ಬಂದಿಯನ್ನು ಈ ಬಸ್ಸಿನಲ್ಲಿ ಕರೆತರಲಾಗಿತ್ತು. ಸಿಬ್ಬಂದಿ ಅಧಿಕ ಸಂಖ್ಯೆಯಲ್ಲಿದ್ದ ಕಾರಣ ಎರಡಕ್ಕಿಂತ ಹೆಚ್ಚಿನ ಬಸ್ಸುಗಳ ಮೂಲಕ ಸಿಬ್ಬಂದಿಯನ್ನು ಕರೆತರುವ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿಯ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗಿತ್ತು.
‘‘ಏಳು ಗಂಟೆಗೆ ನಾವು ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಾವು ಆಸ್ಪತ್ರೆಗೆ ಬರುವುದೇ ಕಷ್ಟವಾಗಿದೆ. ಅದಕ್ಕಾಗಿ ನಮಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಎಲ್ಲರನ್ನೂ ಕರೆದುಕೊಂಡು ಆಸ್ಪತ್ರೆಗೆ ತಲುಪುವ ವೇಳೆಗೆ 10 ಗಂಟೆಯಾಗುತ್ತಾ ಬಂದಿದೆ’’ ಎಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ದಾದಿಯೊಬ್ಬರು ಪ್ರತಿಕ್ರಿಯಿಸಿದರು.
ಕೋವಿಡ್ ಎರಡನೆ ಅಲೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಸಂದರ್ಭ, ವೆನ್‌ಲಾಕ್‌ನಂತಹ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಅತೀ ಅಗತ್ಯ. ಅವರ ಸೇವೆ ಅಮೂಲ್ಯವಾಗಿದ್ದು, ತಮ್ಮ ಕುಟುಂಬ ಹಾಗೂ ಮನೆಯವರನ್ನೆಲ್ಲಾ ಬಿಟ್ಟು ಅವರು ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. ಹಾಗಿರುವಾಗ ಅವರ ಆರೋಗ್ಯದ ಬಗ್ಗೆ ಕಾಳಜಿಯೂ ಜಿಲ್ಲಾಡಳಿತದ್ದಾಗಿರಬೇಕು ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.