ಅಜ್ಜನಿಗಾಗಿ ಟ್ವಿಟರ್‌ ನಲ್ಲಿ ಆಕ್ಸಿಜನ್ ಕೋರಿದ್ದ ಯುವಕನ ವಿರುದ್ಧ ಉತ್ತರಪ್ರದೇಶ ಪೊಲೀಸರಿಂದ ಎಫ್‍ಐಆರ್

Update: 2021-04-28 08:11 GMT

ಲಕ್ನೋ: ತನ್ನ ಅಜ್ಜನಿಗೆ ಆಕ್ಸಿಜನ್ ಬೇಕೆಂದು ಟ್ವಿಟ್ಟರ್ ಬಳಸಿ ಅಪೀಲು ಮಾಡಿದ ಯುವಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ಅಮೇಠಿಯಲ್ಲಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಯುವಕ ಶಶಾಂಕ್ ಯಾದವ್ ತನ್ನ ಟ್ವೀಟ್‍ ನಲ್ಲಿ ತನ್ನ ಅಜ್ಜನಿಗೆ ಕೋವಿಡ್ ಸೋಂಕು ಇದೆಯೇ ಎಂದು ನಮೂದಿಸಿರಲಿಲ್ಲ. ಆದರೆ ಆತ ಭಯ ಮತ್ತು ಆತಂಕ ಸೃಷ್ಟಿಸುವ ಉದ್ದೇಶದಿಂದ ವದಂತಿ ಹರಡಿದ್ದಾನೆಂದು ಆರೋಪಿಸಿ ಪೊಲೀಸರು ಆತನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ ಎಂದು 'thewire' ವರದಿ ಮಾಡಿದೆ.

ಶಶಾಂಕ್ ಆರಂಭದಲ್ಲಿ ಟ್ವೀಟ್ ಮೂಲಕ ತುರ್ತು ಸಂದೇಶ ಕಳುಹಿಸಿದ್ದನಲ್ಲದೆ ನಟ ಸೋನು ಸೂದ್ ಅವರನ್ನೂ ಟ್ಯಾಗ್ ಮಾಡಿದ್ದ. ಆತನ ಸ್ನೇಹಿತ ಅಂಕಿತ್ ಕೂಡ ಇದೇ ಪೋಸ್ಟ್ ಶೇರ್ ಮಾಡಿ ʼದಿ ವೈರ್ʼ ಪತ್ರಕರ್ತೆ ಅರ್ಫಾ ಖನೂಮ್ ಶೆರ್ವಾನಿ ಅವರಿಂದ ಸಹಾಯ ಕೋರಿದ್ದ.

ಕೆಲ ಗಂಟೆಗಳ ನಂತರ ಆಕೆ ಕೂಡ ಶಶಾಂಕ್ ಅಜ್ಜನಿಗೆ ಸಹಾಯ ಕೋರಿ ಒಂದು ಟ್ವೀಟ್ ಪೋಸ್ಟ್ ಮಾಡಿದ್ದರು. ಆದರೆ ಯಾವ ಟ್ವೀಟ್ ನಲ್ಲೂ ಕೋವಿಡ್ ಉಲ್ಲೇಖವಿರಲಿಲ್ಲ. ಶೆರ್ವಾನಿ ಅವರು ಕೇಂದ್ರ ಸಚಿವೆ ಹಾಗೂ ಅಮೇಠಿ ಸಂಸದೆ  ಸ್ಮೃತಿ ಇರಾನಿ ಅವರನ್ನೂ ಟ್ಯಾಗ್ ಮಾಡಿ ಸಹಾಯ ಕೋರಿದ್ದರು.

ಸ್ವಲ್ಪ ನಿಮಿಷಗಳ ನಂತರ ಪ್ರತಿಕ್ರಿಯಿಸಿದ್ದ ಸಚಿವೆ ತಾವು ಯಾದವ್ ಗೆ ಕರೆ ಮಾಡಲು ಹಲವಾರು ಬಾರಿ ಸಂಪರ್ಕಿಸಿದ್ದರೂ ಆತನ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದ್ದರಲ್ಲದೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಅಮೇಠಿ ಪೊಲೀಸರಿಗೆ  ಈ ಕುರಿತು ಪರಿಶೀಲಿಸಲು ಸೂಚಿಸಿದ್ದಾಗಿಯೂ ತಿಳಿಸಿದ್ದರು.

ಆದರೆ ಅಷ್ಟು ಹೊತ್ತಿಗಾಗಿ ಶಶಾಂಕ್ ಅಜ್ಜ ಮೃತಪಟ್ಟಿದ್ದರು. ಈ ಕುರಿತು ಶೆರ್ವಾನಿಗೆ ಅಂಕಿತ್ ಮಾಹಿತಿ ನೀಡಿದ್ದು ಆಕೆ ಈ ಮಾಹಿತಿಯನ್ನು ಸಚಿವೆಗೆ ನೀಡಿದ್ದಾರೆ.

ಮಂಗಳವಾರ ಅಮೇಠಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಅವರು ಸಹಾಯ ಕೋರಿ ಅರ್ಫಾ ಶೆರ್ವಾನಿ ಮೊದಲು ಮಾಡಿದ್ದ ಟ್ವೀಟ್‍ಗೆ ಪ್ರತಿಕ್ರಿಯಿಸಿ ವೈದ್ಯಕೀಯ ವರದಿಯನ್ನು ಶೇರ್ ಮಾಡಿದ್ದರು. ಅದರಲ್ಲಿ ಶಶಾಂಕ್ ಅಜ್ಜನಿಗೆ ಕೋವಿಡ್ ಸೋಂಕು ಇರಲಿಲ್ಲ ಹಾಗೂ ಆತ ದುರ್ಗಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂಬ ಮಾಹಿತಿಯಿತ್ತು.

ಸಂಜೆ ಶಶಾಂಕ್ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಪೊಲೀಸರು ಆತನ 88 ವರ್ಷದ ಅಜ್ಜನಿಗೆ ಕೋವಿಡ್ ಇರಲಿಲ್ಲ ಬದಲು ಆತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದರು. "ಇಂತಹ ಸಂದರ್ಭ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ  ಭಯ ಹುಟ್ಟಿಸುವ ಪೋಸ್ಟ್ ಗಳನ್ನು ಮಾಡುವುದು ಆಕ್ಷೇಪಾರ್ಹ" ಎಂದೂ ಪೊಲೀಸರು ಟ್ವೀಟ್ ಮಾಡಿದ್ದರು.

ಕೋವಿಡ್ ರೋಗಿಗಳಿಗೆ ಮಾತ್ರವಲ್ಲದೆ ಇತರ ಆರೋಗ್ಯ ಸಮಸ್ಯೆಯಿರುವವರಿಗೂ ಆಕ್ಸಿಜನ್ ಅಗತ್ಯವಿದೆ ಎಂದು ಅರಿಯಲು ಪೊಲೀಸರು  ವಿಫಲರಾಗಿದ್ದರು. ಆದರೆ ಶಶಾಂಕ್ ವಿರುದ್ಧ ಐಪಿಸಿಯ ಸೆಕ್ಷನ್ 188, 269, 505(1) ಅನ್ವಯ ಹಾಗೂ ಸಾಂಕ್ರಾಮಿಕ ಮತ್ತು ವಿಪತ್ತು ನಿರ್ವಹಣಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ತಪ್ಪು ಸಾಬೀತಾದಲ್ಲಿ ಆತನಿಗೆ  ಜೈಲು ಶಿಕ್ಷೆಯಾಗಬಹುದು.

ಸದ್ಯ ಈ ಕುರಿತಾದಂತೆ ಸಾಮಾಜಿಕ ಹಾಗೂ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಉತ್ತರಪ್ರದೇಶ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು bar&bench ವರದಿ ಮಾಡಿದೆ. ಸಾಮಾಜಿಕ ತಾಣದಲ್ಲಿ ಆಕ್ಸಿಜನ್‌ ಸಹಾಯ ಕೇಳಿದವರ ವಿರುದ್ಧ ಉತ್ತರಪ್ರದೇಶ ಪೊಲೀಸರು ಕಾನೂನು ಕ್ರಮ ಕೈಗೊಂಡ ಕುರಿತು ಪ್ರಕರಣ ದಾಖಲಿಸಿದ್ದಾಗಿ ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News