ದ.ಕ. ಜಿಲ್ಲೆಯಲ್ಲಿ ಮುಂದುವರಿದ ವಲಸೆ ಕಾರ್ಮಿಕರ ಗುಳೆ!
ಮಂಗಳೂರು, ಎ.29: ಕೋವಿಡ್ ಎರಡನೆ ಅಲೆ ತೀವ್ರಗೊಳ್ಳುತ್ತಿರುವಂತೆಯೇ ರಾಜ್ಯದಲ್ಲಿ ಕರ್ಫ್ಯೂ, ಲಾಕ್‌ಡೌನ್ ಭೀತಿಯಿಂದ ಕಳೆದ ಕೆಲ ದಿನಗಳಿಂದ ದ.ಕ. ಜಿಲ್ಲೆಯಲ್ಲೂ ವಲಸೆ ಕಾರ್ಮಿಕರ ಗುಳೆ ಮುಂದುವರಿದಿದೆ.
ನಗರದಲ್ಲಿ ಹೊಟೇಲ್, ಮೀನುಗಾರಿಕೆ ಸೇರಿದಂತೆ ಬಹುತೇಕ ಉದ್ಯಮಗಳು ಸ್ತಬ್ಧಗೊಂಡಿರುವುದರಿಂದ, ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿರುವುದರಿಂದ ವಲಸೆ ಕಾರ್ಮಿಕರು ಹಿಂಡು ಹಿಂಡಾಗಿ ತಮ್ಮ ಊರುಗಳತ್ತ ಪ್ರಯಾಣಿಸುತ್ತಿದ್ದಾರೆ.
ಇಂದು ಕೂಡಾ ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಕ ಹಲವು ವಲಸೆ ಕಾರ್ಮಿಕರು ತಮ್ಮ ಲಗೇಜ್‌ಗಳೊಂದಿಗೆ ರೈಲು ಪ್ರಯಾಣದ ಸಮಯಕ್ಕಾಗಿ ಕಾಯುತ್ತಿರುವುದು ಕಂಡು ಬಂತು. ನಗರದ ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಕೆಲವರು ನಡೆದುಕೊಂಡು ರೈಲ್ವೇ ನಿಲ್ದಾಣ ಸೇರಿದ್ದರೆ, ಮತ್ತೆ ಕೆಲವರು ನಿನ್ನೆ ರಾತ್ರಿಯಿಂದಲೇ ರೈಲ್ವೇ ನಿಲ್ದಾಣದ ಹೊರ ಆವರಣದಲ್ಲಿ ಲಗೇಜ್‌ಗಳೊಂದಿಗೆ ಬೀಡು ಬಿಟ್ಟಿದ್ದರು.
‘‘ಒಡಿಶಾಕ್ಕೆ ಪ್ರಯಾಣಿಸಬೇಕಿದೆ. ಐದಾರು ಮಂದಿ ಒಟ್ಟಿಗೆ ಸಾಗುತ್ತಿದ್ದೇವೆ. ಇಲ್ಲೇ ನಗರದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. ರಾತ್ರಿಯ ರೈಲಿಗೆ ಟಿಕೆಟ್ ಬುಕ್ ಆಗಿದೆ’’ ಎಂದು ಕಾರ್ಮಿಕರೊಬ್ಬರು ಪ್ರತಿಕ್ರಿಯಿಸಿದರು.
‘‘ಚೆನ್ನೈಗೆ ಹೋಗಬೇಕು. ಲಾಕ್‌ಡೌನ್ ಅಲ್ಲವೇ, ಊರಿಗಾದರೂ ಹೋಗಿ ಇರೋಣ. ಇಲ್ಲಿ ಕೆಲಸವಿಲ್ಲದೆ ಏನು ಮಾಡೋದು. ಲಾಕ್‌ಡೌನ್ ತೆರವಾದ ಬಳಿಕ ಕೆಲಸಕ್ಕೆ ಬರುವ ಬಗ್ಗೆ ಯೋಚನೆ ಮಾಡೋಣ’’ ಎಂದು ಚೆನ್ನೈಗೆ ಹೊರಡು ರಾತ್ರಿ ವೇಳೆಯ ರೈಲಿಗಾಗಿ ಕಾಯುತ್ತಿದ್ದ ಯುವಕನೊಬ್ಬ ಪ್ರತಿಕ್ರಿಯಿಸಿದ.
ಬೀದಿಬದಿ ವ್ಯಾಪಾರಿಗಳ ಗೋಳು ಕೇಳುವವರಿಲ್ಲ!
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಹಣ್ಣು, ತರಕಾರಿ, ದಿನಸಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸಾರ್ವಜನಿಕ ವಾಹನಕ್ಕೆ ಅವಕಾಶ ಇಲ್ಲದ ಕಾರಣ ನಗರದ ಸ್ಟೇಟ್ ಬ್ಯಾಂಕ್‌ನ ಮೀನು ಮಾರುಕಟ್ಟೆ, ಸೆಂಟ್ರಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ತೀರಾ ವಿರಳವಾಗಿತ್ತು. ಈಗಾಗಲೇ ಮೀನುಗಾರಿಕೆ ಬಹುತೇಕ ಸ್ತಬ್ಧಗೊಂಡು ಮೀನುಗಾರರು ಸಂಕಟ ಎದುರಿಸುತ್ತಿದ್ದಾರೆ. ಆದರೆ ಇರುವ ಅಲ್ಪಸ್ವಲ್ಪ ಮೀನು ಕೂಡಾ ಮಾರಾಟವಾಗದ ಕಾರಣ ಮೀನುಗಾರ ಮಹಿಳೆಯರು ಪರದಾಡುವಂತಾಗಿದೆ. ಇನ್ನು ಕೇಂದ್ರ ಮಾರುಕಟ್ಟೆ ಸುತ್ತಮುತ್ತಲು ಹಾಗೂ ಸ್ಟೇಟ್‌ಬ್ಯಾಂಕ್ ಬಳಿ ಇರುವ ಹಣ್ಣು, ತರಕಾರಿ ವ್ಯಾಪಾರಿಗಳ ಗೋಳು ಮಾತ್ರ ಹೇಳತೀರದು. ವಿನಾಯಿತಿ ಅವಧಿಯಲ್ಲೂ ಗ್ರಾಹಕರಿಲ್ಲದೆ ಕೊರಗುವ ಪರಿಸ್ಥಿತಿ ಅವರದ್ದು. ಸ್ಮಾರ್ಟ್ ಸಿಟಿ ಕಾಮಗಾರಿ ಅಬಾಧಿತ ನಿರ್ಮಾಣ ಕಾಮಗಾರಿಗೆ ಕಠಿಣ ಕರ್ಫ್ಯೂ (ಲಾಕ್‌ಡೌನ್) ಅವಧಿಯಲ್ಲೂ ಅವಕಾಶ ನೀಡಿರುವುದರಿಂದ ಜೆಸಿಬಿಗಳ ಮೂಲಕ ನಗರದ ವಿವಿಧ ಕಡೆಗಳಲ್ಲಿ ಕಾರ್ಮಿಕರೊಂದಿಗೆ ಸ್ಮಾರ್ಟ್‌ಸಿಟಿಯಡಿ ವಿವಿಧ ರಸ್ತೆ ಕಾಮಗಾರಿಗಳು ನಡೆಯುತ್ತಿವೆ.
ಸಣ್ಣ ಪುಟ್ಟ ಮನೆ ನಿರ್ಮಾಣ ಕಾರ್ಮಿಕರ ಪರದಾಟ!
ಬೃಹತ್ ಕಟ್ಟಡಗಳ ನಿರ್ಮಾಪಕರು ತಮ್ಮ ಕಾರ್ಮಿಕರನ್ನು ಕರೆತರಲು ತಮ್ಮಲ್ಲಿರುವ ವಾಹನಗಳನ್ನು ಉಪಯೋಗಿಸಬಹುದಾಗಿದ್ದು, ಹಲವು ಕಡೆಗಳಲ್ಲಿ ಇಂತಹ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಆದರೆ ಸಣ್ಣ ಪುಟ್ಟ ಮನೆ ನಿರ್ಮಾಣ ಕಾಮಗಾರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಕಾರ್ಮಿಕರನ್ನು ಹೊಂದಿಸುವುದು ಕಷ್ಟಸಾಧ್ಯವಾಗಿದೆ. ಸಣ್ಣ ಮನೆ ಹಾಗೂ ಇತರ ನಿರ್ಮಾಣ ಗುತ್ತಿಗೆದಾರರು ಕಾರ್ಮಿಕರಿಲ್ಲದೆ ಪರದಾಡುವಂತಾಗಿದೆ. ಕೆಲವು ಕಾರ್ಮಿಕರು ಊಟವನ್ನು ಹೊತ್ತುಕೊಂಡು ಕಿ.ಮೀ. ನಡೆದುಕೊಂಡೇ ನಿರ್ಮಾಣ ಕಾಮಗಾರಿಯ ಪ್ರದೇಶದತ್ತ ಸಾಗುತ್ತಿರುವುದು ಕೂಡಾ ಕಂಡು ಬಂತು.