ಪುತ್ತೂರು: ರಸ್ತೆ ಅಪಘಾತದ ಗಾಯಾಳು ಕ್ಷಯ ನಿಯಂತ್ರಣ ವಿಭಾಗದ ಆರೋಗ್ಯ ನಿರೀಕ್ಷಕ ನಿಧನ
ಪುತ್ತೂರು, ಎ.28: ಎರಡು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪುತ್ತೂರು ತಾಲೂಕಿನ ಮುಂಡೂರು ನಿವಾಸಿ ಮಂಗಳೂರು ಕ್ಷಯ ನಿಯಂತ್ರಣ ವಿಭಾಗದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಆಗಿದ್ದ ವೆಂಕಟೇಶ್ ಉದ್ಧಾರ್(45) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಧಾರವಾಡ ಮೂಲದವರಾದ ವೆಂಕಟೇಶ್ ಉದ್ಧಾರ್ ಅವರು ಮುಂಡೂರಿನಲ್ಲಿ ವಾಸ್ತವ್ಯವಿದ್ದು, 1998ರಲ್ಲಿ ಪುತ್ತೂರು ಆರೋಗ್ಯ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದರು. ಆರಂಭದಲ್ಲಿ ಕುಷ್ಟ ರೋಗ ನಿಯಂತ್ರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಆ ಬಳಿಕ ಪದ್ದೋನತಿ ಹೊಂದಿ ಮಂಗಳೂರು ಜಿಲ್ಲಾ ಕ್ಷಯ ನಿಯಂತ್ರಣ ವಿಭಾಗದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿ ನಿತ್ಯ ಮಂಗಳೂರಿಗೆ ಹೋಗಿ ಬರುತ್ತಿದ್ದ ಅವರು, ಎ.26ರಂದು ಮಂಗಳೂರಿನಿಂದ ಪುತ್ತೂರಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಾಣಿ ಸಮೀಪ ಅವರ ಬೈಕ್ ಅಪಘಾತಕ್ಕೀಡಾಗಿತ್ತು. ತೀವ್ರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.