ಪತಿಯ ಫೇಸ್ಬುಕ್ ಅವಹೇಳನಕಾರಿ ಬರಹ: ಬ್ಯಾರಿ ಅಕಾಡಮಿಯ ಸದಸ್ಯತ್ವದಿಂದ ಪತ್ನಿಯ ಪದಚ್ಯುತಿ
ಮಂಗಳೂರು, ಎ.28: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನಾಮಕರಣ ಸದಸ್ಯೆಯಾಗಿದ್ದ ಮೈಸೂರು ಮೂಲದ ನಫೀಸಾ ಮಿಸ್ರಿಯಾರನ್ನು ಸದಸ್ಯತ್ವದಿಂದ ಪದಚ್ಯುತಿಗೊಳಿಸಲಾಗಿದೆ.
‘ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ದೇಶದ ಪ್ರಧಾನಿಯ ವಿರುದ್ಧ ಪೋಸ್ಟರ್/ಹೇಳಿಕೆಗಳನ್ನು ತಮ್ಮ ಪತಿ ಹಾಕಿರುವುದಾಗಿ ಅಕಾಡಮಿಯ ಅಧ್ಯಕ್ಷರು ಪತ್ರದಲ್ಲಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಗಳಿಗೆ ಅವಕಾಶವಿದೆ. ಈ ಬಗ್ಗೆ ನಮ್ಮ ವಿರೋಧವಿರುವುದಿಲ್ಲ. ಆದರೆ ದೇಶದ ಪ್ರಧಾನಿಯ ಬಗ್ಗೆ ಅತ್ಯಂತ ಕಠೋರವಾದಂತಹ ಹಾಗೂ ಕಾನೂನಿಗೆ ವಿರುದ್ಧವಾದ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಪತಿ ಬರೆದಿರುವುದರಿಂದ ಮತ್ತು ದೇಶದ ಪ್ರಧಾನಿಯ ಸಾವನ್ನು ಬಯಸುವವರ ಹೆಂಡತಿಯು ಬ್ಯಾರಿ ಅಕಾಡಮಿಯ ಸದಸ್ಯೆಯಾಗಿ ಮುಂದುವರಿಯುವುದು ಸರಿಯಲ್ಲ ಮತ್ತು ತಮ್ಮನ್ನು ತಕ್ಷಣದಿಂದ ಅಕಾಡಮಿಯ ನಾಮನಿರ್ದೇಶಿತ ಸದಸ್ಯತ್ವದಿಂದ ಪದಮುಕ್ತಗೊಳಿಸುವಂತೆ ಅಧ್ಯಕ್ಷರು ಆದೇಶಿಸಿದ್ದಾರೆ’ ಎಂದು ಅಕಾಡಮಿಯ ರಿಜಿಸ್ಟ್ರಾರ್ ನಫೀಸಾರಿಗೆ ಕಳಿಸಿದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎ.27ರಂದು ಹೊರಡಿಸಲಾದ ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಪತಿಯ ಬರಹಕ್ಕೆ ಪತ್ನಿಗೆ ಯಾಕೆ ಶಿಕ್ಷೆ ಎಂದು ಪ್ರಶ್ನಿಸಲಾಗುತ್ತಿದೆ.
ಕೊಣಾಜೆ ಠಾಣೆಗೆ ದೂರು
ಲುಕ್ಮಾನ್ ಅಡ್ಯಾರ್ ಎಂಬಾತ ವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ದೇಶದ ಪ್ರಧಾನಿಯನ್ನು ಏಕ ವಚನದಲ್ಲಿ ಸಂಭೋದಿಸಿದ್ದಲ್ಲದೆ ಅವಹೇಳನಕಾರಿ ಫೇಸ್‌ಬುಕ್ ಫೋಸ್ಟ್ ಮಾಡಿದ್ದಾನೆ. ಈ ಬಗ್ಗೆ ಕ್ರಮ ಜರುಗಿಸುವಂತೆ ಮಂಗಳವಾರ ಕೊಣಾಜೆ ಠಾಣೆಯಲ್ಲಿ ಬಿಜೆಪಿಯ ನಾಯಕ ಫಝಲ್ ಅಸೈಗೋಳಿ ದೂರು ನೀಡಿದ್ದಾರೆ.
ಕೊರೋನ ಸಂಕಷ್ಟ ಕಾಲದಲ್ಲಿ ಪವಿತ್ರ ಮಕ್ಕಾ ಸೇರಿದಂತೆ ವಿಶ್ವದಾದ್ಯಂತ ಭಾರತದ ಒಳಿತಿಗಾಗಿ ಪ್ರಾರ್ಥನೆ ನಡೆಯುತ್ತಿರುವಾಗ ವಿಶ್ವದ ನಾನಾ ರಾಷ್ಟ್ರ ಭಾರತಕ್ಕೆ ಸಹಾಯ ಹಸ್ತ ಚಾಚುತ್ತಿರುವಾಗ ಲುಕ್ಮಾನ್ ಅಡ್ಯಾರ್ ಎಂಬ ವ್ಯಕ್ತಿ ಪವಿತ್ರ ರಮಝಾನ್‌ನಲ್ಲೂ ಸಾಮಾಜಿಕ ಜಾಲತಾಣದಲ್ಲಿ ವಿಷಬೀಜ ಬಿತ್ತುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.