ಮಣಿಪಾಲ ಕೆಎಂಸಿಯ ಹೊರರೋಗಿ ವಿಭಾಗ ಸೇವೆ ಅಪರಾಹ್ನದವರೆಗೆ ಮಾತ್ರ
Update: 2021-04-28 18:29 IST
ಉಡುಪಿ, ಎ.28: ರಾಜ್ಯಾದ್ಯಂತ ಮೇ 12ರವರೆಗೆ ಜನತಾ ಕರ್ಫ್ಯೂ ಜಾರಿಯ ಲ್ಲಿರುವುದರಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದ ಎಲ್ಲಾ ಸೇವೆಗಳು ಅಪರಾಹ್ನದವರೆಗೆ ಮಾತ್ರ ಲಭ್ಯವಿರಲಿವೆ ಎಂದು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರದ ಆದೇಶದಂತೆ ರಾಜ್ಯಾದ್ಯಂತ ಲಾಕ್‌ಡೌನ್ ಮಾದರಿ ಯಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಹಾಗೂ ಸಾರ್ವಜನಿಕ ಸಾರಿಗೆ ಇಲ್ಲದಿರುವುದರಿಂದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಎ.29ರ ಗುರುವಾರ ದಿಂದ ಜಾರಿಗೆ ಬರುವಂತೆ,ಎಲ್ಲಾ ಹೊರರೋಗಿ ಸೇವೆಗಳು ಬೆಳಗ್ಗೆ 8:00ರಿಂದ ಅಪರಾಹ್ನ 2:00ರವರೆಗೆ ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸಲಿವೆ. ಈ ಬದಲಾವಣೆ ಸರಕಾರ ಕೋವಿಡ್ ಕರ್ಫ್ಯೂ ಆದೇಶ ಇರುವವರೆಗೆ ಮುಂದುವರಿಯುತ್ತದೆ. ಆದರೂ ತುರ್ತು ಸೇವೆಗಳು ಎಂದಿನಂತೆ ವಾರದ ಎಲ್ಲಾ ದಿನಗಳಲ್ಲಿ ದಿನದ 24ಗಂಟೆಯೂ ಲಭ್ಯವಿರುತ್ತವೆ ಎಂದು ಡಾ.ಅವಿನಾಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.