ದ.ಕ. ಜಿಲ್ಲೆಯಲ್ಲಿ ಬುಧವಾರ ಕೋವಿಡ್ ನಿಂದ ನಾಲ್ಕು ಮಂದಿ ಮೃತ್ಯು: 664 ಸೋಂಕು ಪ್ರಕರಣ ಪತ್ತೆ
ಮಂಗಳೂರು, ಎ.28: ದ.ಕ.ಜಿಲ್ಲೆಯಲ್ಲಿ ಬುಧವಾರ ಕೋವಿಡ್-19ಕ್ಕೆ ನಾಲ್ಕು ಮಂದಿ ಮೃತಪಟ್ಟರೆ, 664 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ.
ಕೋಟೆಕಾರಿನಲ್ಲಿ ಮಹಿಳೆ ಸಹಿತ ಬಂಟ್ವಾಳ, ಮುಂಡಾಜೆ, ಉಳ್ಳಾಲದಲ್ಲಿ ಹಿರಿಯರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 755ಕ್ಕೇರಿದೆ.
ಈ ಮಧ್ಯೆ ಜಿಲ್ಲೆಯಲ್ಲಿ ಬುಧವಾರ ಕೊರೋನ ಸೋಂಕಿನಿಂದ ಗುಣಮುಖರಾಗಿ 256 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
2 ಕಂಟೈನ್‌ಮೆಂಟ್ ವಲಯ: ನಗರದ ಬಳ್ಳಾಲ್ ಭಾಗ್ ಮತ್ತು ಹಂಪನಕಟ್ಟೆಯ ಎರಡು ಮನೆಗಳಲ್ಲಿ ತಲಾ 5 ಪಾಸಿಟಿವ್ ಪ್ರಕರಣ ಪತ್ತೆಯಾದ ಮೇರೆಗೆ 2 ಕಂಟೈನ್ಮೆಂಟ್ ವಲಯ ಘೋಷಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯದ ಸಂಖ್ಯೆ 39ಕ್ಕೇರಿದೆ.
ಜಿಲ್ಲೆಯಲ್ಲಿ ಭಾಗಶಃ ಲಾಕ್‌ಡೌನ್ ಇದ್ದರೂ ಕೂಡ ಸೂಕ್ತ ದಾಖಲೆಗಳೊಂದಿಗೆ ಲಸಿಕೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಬುಧವಾರ 8,460 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಗುರುವಾರ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪಕೇಂದ್ರದಲ್ಲಿ ಮಕ್ಕಳಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮವಿರುವುದರಿಂದ ಈ ಕೇಂದ್ರದಲ್ಲಿ ಲಸಿಕೆಯ ವಿತರಣೆ ಇರುವುದಿಲ್ಲ. ಉಳಿದಂತೆ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆಯ ವಿತರಣೆ ಕೆಲಸ ನಡೆಯಲಿದೆ. ಖಾಸಗಿಯಲ್ಲಿ ಲಸಿಕೆ ಮುಗಿದಿರುವ ಕಾರಣ ಇಲ್ಲಿ ಗುರುವಾರ ಕೂಡ ಲಸಿಕೆ ಲಭ್ಯವಿಲ್ಲ.