ಗುಜರಾತ್: ಆಮ್ಲಜನಕಕ್ಕಾಗಿ ಸರದಿಯಲ್ಲಿ ನಿಲ್ಲಲು ನಿರಾಕರಿಸಿದ ವ್ಯಕ್ತಿಯಿಂದ ಗುಂಡು ಹಾರಾಟ
ಅಹ್ಮದಾಬಾದ್.ಎ.28: ತನ್ನ ಆಮ್ಲಜನಕ ಸಿಲಿಂಡರ್ ನ್ನು ಮರುಪೂರಣ ಮಾಡಲು ನಿರಾಕರಿಸಿದ್ದ ಸಿಬ್ಬಂದಿಗಳನ್ನು ಬೆದರಿಸಲು ವ್ಯಕ್ತಿಯೋರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದು ಕಛ್ ನ ಆಮ್ಲಜನಕ ಸ್ಥಾವರದ ಹೊರಗೆ ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು.
ಕಛ್ ಜಿಲ್ಲೆಯ ಭಚಾವು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಆಮ್ಲಜನಕ ಮರುಪೂರಣ ಕೇಂದ್ರದ ಹೊರಗೆ ಜನರು ಸರದಿಯಲ್ಲಿ ನಿಂತಿದ್ದು, ಈ ವೇಳೆ ಆಮ್ಲಜನಕಕ್ಕಾಗಿ ಅಲ್ಲಿಗೆ ಬಂದಿದ್ದ ನಾಲ್ವರು ಶಸ್ತ್ರ ಸಜ್ಜಿತ ವ್ಯಕ್ತಿಗಳು ಸರದಿ ಸಾಲಿನಲ್ಲಿ ನಿಲ್ಲಲು ನಿರಾಕರಿಸಿದ್ದರು ಮತ್ತು ಮೊದಲು ತಮ್ಮ ಸಿಲಿಂಡರ್ ನ್ನು ಭರ್ತಿ ಮಾಡುವಂತೆ ಸಿಬ್ಬಂದಿಗೆ ಒತ್ತಾಯಿಸಿದ್ದರು.
ಈ ವೇಳೆ ಅವರ ನಡುವೆ ವಾಗ್ವಾದ ನಡೆದಿದ್ದು, ಆರೋಪಿಗಳ ಪೈಕಿ ಓರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದು ಜನರಲ್ಲಿ ಭೀತಿಯನ್ನು ಸೃಷ್ಟಿಸಿತ್ತು. ಸ್ಥಳದಿಂದ ಪರಾರಿಯಾಗುವ ಮುನ್ನ ಆತ ಕೇಂದ್ರದ ಸಿಬ್ಬಂದಿಗಳನ್ನು ಬೆದರಿಸಲು ಇನ್ನೂ ಮೂರು ಸುತ್ತು ಗುಂಡು ಹಾರಿಸಿದ್ದ.
ಸ್ಥಳಕ್ಕ ಭೇಟಿನೀಡಿದ್ದ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.