​ನಾಟೆಕಲ್: ಲಸಿಕೆ ಸಿಗದೆ ಮರಳಿದ ನಾಗರಿಕರು

Update: 2021-04-28 17:29 GMT

ಮಂಗಳೂರು, ಎ.28: ಲಾಕ್‌ಡೌನ್-ಕರ್ಫ್ಯೂ ಮಧ್ಯೆಯೂ ಕೋವಿಡ್ ನಿಗ್ರಹ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡುವುದಾಗಿ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ ಮೇರೆಗೆ ದೇರಳಕಟ್ಟೆ ಸಮೀಪದ ನಾಟೆಕಲ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆ ಹಾಕಿಸಿಕೊಳ್ಳಲು ಬಂದ ನಾಗರಿಕರು ಲಸಿಕೆ ಸಿಗದೆ ವಾಪಸ್ ಮನೆಗೆ ಮರಳಿದ ಘಟನೆ ಬುಧವಾರ ನಡೆದಿದೆ.

ಈ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸುಮಾರು 200ಕ್ಕೂ ಅಧಿಕ ಮಂದಿ ತೆರಳಿದ್ದರು. ಆದರೆ ಬೆರೆಳೆಣಿಕೆಯಷ್ಟು ಮಂದಿಗೆ ಮಾತ್ರ ಲಸಿಕೆ ಲಭಿಸಿದ್ದರಿಂದ ಉಳಿದವರು ನಿರಾಶೆಯಿಂದ ಮರಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ ಕೊರೋನ ಸೋಂಕು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕರು ಲಸಿಕೆ ಪಡೆಯಲು ಉತ್ಸುಕರಾಗಿದ್ದಾರೆ. ಅದರಂತೆ ಇದೀಗ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಆದರೆ ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆಯಾಗದ ಕಾರಣ ಸಾರ್ವಜನಿಕರಿಗೆ ಲಸಿಕೆ ಸಿಗುತ್ತಿಲ್ಲ.

ಬುಧವಾರ ಕೆಲವರು ಬಸ್ ಸಂಚಾರವಿಲ್ಲದಿದ್ದರೂ ಕೂಡ ಆಟೋ ರಿಕ್ಷಾವನ್ನು ಬಾಡಿಗೆ ಪಡೆದು, ನಡೆದುಕೊಂಡು ಪ್ರಾಥಮಿಕ ಕೇಂದ್ರ ತಲುಪಿದ್ದರು. ಆದರೆ ಲಸಿಕೆ ಸಿಗದೆ ನಿರಾಶೆಯಿಂದ ಮರಳಿದ್ದಾರೆ.

ಆನ್‌ಲೈನ್ ನೋಂದಣಿ ಮಾಡಿಕೊಂಡವರಿಗೆ ಲಸಿಕೆ ಲಭ್ಯ
ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಸರಬರಾಜಿನಲ್ಲಿ ವ್ಯತ್ಯಯ ಕಂಡು ಬಂದಿದೆ. ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಫಲಾನುಭವಿಗಳಿಗೆ ಲಸಿಕೆ ನೀಡಲು ಏಕಕಾಲದಲ್ಲಿ ಸಾಧ್ಯವಾಗದ ಕಾರಣ ಜಿಲ್ಲೆಯ ಎಲ್ಲಾ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ.

ಈಗಾಗಲೇ ಮೊದಲನೇ ಡೋಸ್ ಲಸಿಕೆಯನ್ನು ಪಡೆದ ಫಲಾನುಭವಿಗಳಿಗೆ ಮಾತ್ರ 2ನೇ ಡೋಸ್ ನೀಡಲಾಗುವುದು, ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಕೊಂಡ ಫಲಾನುಭವಿಗಳಿಗೆ (45 ಮತ್ತು 60 ವರ್ಷ ಮೇಲ್ಪಟ್ಟ) ಲಸಿಕೆಯ ಲಭ್ಯತೆ ಗಮನಿಸಿ ಲಸಿಕೆ ಪಡೆಯಲು ಮುಂದಿನ ದಿನಗಳಲ್ಲಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಆನ್ ಸ್ಪಾಟ್ ನೋಂದಣಿಗೆ ಅವಕಾಶವಿಲ್ಲ. ಸರಕಾರಿ ಆರೋಗ್ಯ ಕೇಂದ್ರ ಹೊರತುಪಡಿಸಿ ಸಂಘ ಸಂಸ್ಥೆಗಳ ಮೂಲಕ ಲಸಿಕಾ ಶಿಬಿರವನ್ನು ಹೊರವಲಯದಲ್ಲಿ ನಡೆಸಲು ಕೂಡ ಅವಕಾಶವಿಲ್ಲ. 18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಲಸಿಕೆಯನ್ನು ಪಡೆದುಕೊಳ್ಳಲು ಆನ್‌ಲೈನ್ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. (http://cowin.gov.in OR Aarogya Setu App OR UMANG App). ಆದರೆ ಶಿಬಿರವನ್ನು ಲಸಿಕಾ ಲಭ್ಯತೆಯನ್ನು ಗಮನಿಸಿ ಮೇ 10ರ ಬಳಿಕ ಆಯೋಜಿಸಲಾಗುವುದು. ಕೊವ್ಯಾಕ್ಸಿನ್ ಎರಡನೇ ಡೋಸ್‌ನ್ನು 4ರಿಂದ 6 ವಾರದೊಳಗೆ ಮತ್ತು ಕೋಶೀಲ್ಡ್ ವ್ಯಾಕ್ಸಿನ್‌ನ 2ನೇ ಡೋಸ್‌ನ್ನು 6ರಿಂದ 8ವಾರದೊಳಗಡೆ ಪಡೆದುಕೊಳ್ಳಬೇಕು. ಆದರೂ ಈ ಅವಧಿ 1 ಅಥವಾ 2 ವಾರ ಹೆಚ್ಚಾದರೆ ಫಲಾನುಭವಿಗಳು ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News