×
Ad

ಹೆಜಮಾಡಿ ಚೆಕ್‌ಪೋಸ್ಟ್: ಕರ್ತವ್ಯದ ಬಗ್ಗೆ ಗೊಂದಲ, ಅರ್ಧಕ್ಕೆ ತಪಾಸಣೆ ನಿಲ್ಲಿಸಿದ ಪೊಲೀಸರು

Update: 2021-04-28 22:52 IST

ಪಡುಬಿದ್ರೆ, ಎ.28: ಕರ್ತವ್ಯ ನಿರ್ವಹಣೆ ಸಂಬಂಧಿಸಿ ಪೊಲೀಸ್, ಶಿಕ್ಷಣ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನಡುವಿನ ಗೊಂದಲವೇರ್ಪಟ್ಟು ಪೊಲೀಸರು ತಪಾಸಣೆ ಅರ್ಧಕ್ಕೆ ನಿಲ್ಲಿಸಿದ ಘಟನೆ ಹೆಜಮಾಡಿಯಲ್ಲಿ ನಿರ್ಮಿಸಲಾದ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಹೆಜಮಾಡಿಯಲ್ಲಿ ನಿರ್ಮಿಸಲಾದ ಈ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ಇಬ್ಬರು ಶಿಕ್ಷಕರು ಸಹಿತ ಆರು ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಾಹನ ಸಂಚಾರದ ಮಾಹಿತಿ ದಾಖಲಿಸುವ ಕಾರ್ಯವನ್ನು ಶಿಕ್ಷಕರಿಗೆ ವಹಿಸಲಾಗಿದ್ದು, ಅವರು ತಪಾಸಣೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಪೊಲೀಸರು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಪಡುಬಿದ್ರೆ ಠಾಣಾಧಿಕಾರಿ ದಿಲೀಪ್ ಅವರು ಸ್ಥಳಕ್ಕಾಗಮಿಸಿದ ಕಾಪು ಪ್ರಭಾರ ತಹಶೀಲ್ದಾರ್ ಪ್ರತಿಭಾರ ಗಮನಕ್ಕೆ ತಂದರು. ಆದರೆ ತಹಶೀಲ್ದಾರ್ ಸುಮ್ಮನೆ ತೆರಳಿದರು. ಇದರಿಂದ ಅಸಮಾಧಾನಗೊಂಡ ಪೊಲೀಸರು ತಹಶೀಲ್ದಾರ್ ತೆರಳಿದ ಬಳಿಕ ವಾಹನ ಪಾಸಣೆಯನ್ನೇ ಸ್ಥಗಿತಗೊಳಿಸಿದರು ಎಂದು ತಿಳಿದು ಬಂದಿದೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಭರತ್ ರೆಡ್ಡಿಗೆ ಈ ಬಗ್ಗೆ ದೂರಿದರು. ಈ ವೇಳೆ ತಹಶೀಲ್ದಾರ್ ಶಿಕ್ಷಕರಿಗೆ ಕರೆ ಮಾಡಿ ರಸ್ತೆಯಲ್ಲಿ ವಾಹನ ನಿಲುಗಡೆ ಕಾರ್ಯದಲ್ಲಿ ಪೊಲೀಸರೊಂದಿಗೆ ಸಹಕರಿಸುವಂತೆ ಸೂಚಿಸಿದರು. ಅದರಂತೆ ಒಬ್ಬರು ಶಿಕ್ಷಕರು ತಪಾಸಣಾ ಕೇಂದ್ರದ ಒಳಗೆ ವಾಹನ ಮಾಹಿತಿ ದಾಖಲಿಸಿದರೆ ಇನ್ನೊಬ್ಬರು ಹೆದ್ದಾರಿಯಲ್ಲಿ ಪೊಲೀಸರೊಂದಿಗೆ ವಾಹನ ನಿಲ್ಲಿಸುವ ಕೆಲಸದಲ್ಲಿ ನಿರತರಾದರು.

ಬಳಿಕ ಕರ್ತವ್ಯದಲ್ಲಿದ್ದ ಶಿಕ್ಷಕರು ಈ ಬಗ್ಗೆ ಶಿಕ್ಷಣಾಧಿಕಾರಿಯಲ್ಲಿ ದೂರಿದರು. ಮಧ್ಯಾಹ್ನ ಬಳಿಕ ಶಿಕ್ಷಕರು ತಪಾಸಣಾ ಕೇಂದ್ರದೊಳಗೆ ಕುಳಿತು ದಾಖಲಿಸುವ ಕಾರ್ಯ ನಡೆಸಿದರೆ ಪೊಲೀಸರು ಅವರ ಕರ್ತವ್ಯ ನಿರ್ವಹಿಸಿದರು. ಅದರೊಂದಿಗೆ ಗೊಂದಲ ಮುಕ್ತಾಯಗೊಂಡಿತು.

ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ, ಗ್ರಾಮ ಕರಣಿಕ ಅರುಣ್ ಕುಮಾರ್, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷೆ ಪವಿತ್ರ ಗಿರೀಶ್, ಪಿಡಿಒ ಸುಮತಿ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News