ಶ್ರೀಲಂಕಾ: ಬುರ್ಖಾ ನಿಷೇಧ ಪ್ರಸ್ತಾವಕ್ಕೆ ಸಚಿವ ಸಂಪುಟ ಅಂಗೀಕಾರ
Update: 2021-04-28 22:55 IST
ಕೊಲಂಬೊ (ಶ್ರೀಲಂಕಾ), ಎ. 28: ಬುರ್ಖಾ ಸೇರಿದಂತೆ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಪರದೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವುದನ್ನು ನಿಷೇಧಿಸುವ ಪ್ರಸ್ತಾವಕ್ಕೆ ಶ್ರೀಲಂಕಾದ ಸಚಿವ ಸಂಪುಟ ಅಂಗೀಕಾರ ನೀಡಿದೆ. ಇದು ಅಂತರ್‌ರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂಬ ವಿಶ್ವಸಂಸ್ಥೆಯ ತಜ್ಞರ ಹೇಳಿಕೆಯ ಹೊರತಾಗಿಯೂ, ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ ಅದು ಈ ಕ್ರಮ ತೆಗೆದುಕೊಂಡಿದೆ.
ಮಂಗಳವಾರ ನಡೆದ ವಾರದ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಭದ್ರತಾ ಸಚಿವ ಸರತ್ ವೀರಸೇಕರ ಮಂಡಿಸಿದ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿತು ಎಂದು ವೀರಸೇಕರ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿದ್ದಾರೆ.
ಈ ಪ್ರಸ್ತಾವವನ್ನು ಇನ್ನು ಅಟಾರ್ನಿ ಜನರಲ್ ಕಚೇರಿಗೆ ಕಳುಹಿಸಲಾಗುತ್ತದೆ. ಅದು ಕಾನೂನಾಗಲು ಸಂಸತ್ತು ಅದಕ್ಕೆ ಅಂಗೀಕಾರ ನೀಡಬೇಕಾಗಿದೆ. ಸಂಸತ್‌ನಲ್ಲಿ ಸರಕಾರ ಬಹುಮತ ಹೊಂದಿರುವುದರಿಂದ ಪ್ರಸ್ತಾವವು ಸುಲಭವಾಗಿ ಅಂಗೀಕಾರಗೊಳ್ಳಬಹುದಾಗಿದೆ.