×
Ad

ಕೇಂದ್ರ ಮಾರುಕಟ್ಟೆ ಸುತ್ತಮುತ್ತ ವ್ಯಾಪಾರಕ್ಕೆ ಅವಕಾಶವಿಲ್ಲ: ದ.ಕ. ಜಿಲ್ಲಾಧಿಕಾರಿ

Update: 2021-04-29 23:13 IST

ಮಂಗಳೂರು, ಎ.29: ನಗರದ ಕೇಂದ್ರ ಮಾರುಕಟ್ಟೆಯನ್ನು ಬೈಕಂಪಾಡಿಗೆ ಸ್ಥಳಾಂತರಿಸಲಾಗಿದ್ದರೂ ಕೂಡ ಕೆಲವು ಮಂದಿ ಕೋವಿಡ್-19 ನಿಯಮ ಉಲ್ಲಂಘಿಸಿ ಸೋಂಕು ಹರಡಲು ಅನುವು ಮಾಡಿಕೊಡುವ ರೀತಿಯಲ್ಲಿ ಕೇಂದ್ರ ಮಾರುಕಟ್ಟೆಯ ಸುತ್ತಮುತ್ತ ವ್ಯಾಪಾರ ಮಾಡುತ್ತಿದ್ದಾರೆ. ಹಾಗಾಗಿ ಈ ಪರಿಸರದಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಕೇಂದ್ರ ಮಾರುಕಟ್ಟೆಯ ಪರಿಸರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಬಗ್ಗೆ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರು ಕೇಂದ್ರ ತರಕಾರಿ ಮತ್ತು ಮೀನು ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಬೀದಿಬದಿ ವ್ಯಾಪಾರಿಗಳು ಹಾಗೂ ಸಗಟು ವ್ಯಾಪಾರಿಗಳಸಹಿತ ಸಾವಿರಾರು ಮಂದಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಗುಂಪು ಸೇರುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂದರ್ಭ ಸುರಕ್ಷಿತ ಅಂತರ ಕಾಪಾಡದೆ ಮುಖಗವಸು ಧರಿಸದೆ ಸಾಂಕ್ರಾಮಿಕ ರೋಗವು ಹರಡಲು ಅನುವು ಮಾಡಿಕೊಡುವ ರೀತಿಯಲ್ಲಿ ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ಈಗಾಗಲೇ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ವರ್ಗಾಯಿಸಲಾಗಿದೆ. ಕೇಂದ್ರ ಮಾರುಕಟ್ಟೆಯ ಸುತ್ತಮುತ್ತ ಯಾರಿಗೂ ವ್ಯಾಪಾರ ಮಾಡಲು ಪರವಾನಿಗೆ ನೀಡಿಲ್ಲ. ಹಾಗಾಗಿ ಈ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಡೆಸುವುದು ಅನಧಿಕೃತವಾಗಿರುತ್ತದೆ ಎಂದು ಡಿಸಿ ಹೇಳಿದರು.

ಸಗಟು ವ್ಯಾಪಾರವನ್ನು ಎಲ್ಲರೂ ಬೈಕಂಪಾಡಿ ಎಪಿಎಂಸಿ ಯಾರ್ಡ್‌ನಲ್ಲೇ ಮಾಡಬೇಕು. ಚಿಲ್ಲರೆ ವ್ಯಾಪಾರವನ್ನು ಕೇಂದ್ರೀಕೃತ ರೀತಿಯಲ್ಲಿ ಆಯಾ ವಾರ್ಡು ಮಟ್ಟದ ಮಾರುಕಟ್ಟೆ, ಅಂಗಡಿಗಳ ಮೂಲಕ ಮಾಡಬೇಕು ಎಂದ ಡಿಸಿ, ಜನಸಾಮಾನ್ಯರಿಗೆ ತರಕಾರಿ ಹಾಗೂ ದಿನಸಿ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನಪಾ ಆಯುಕ್ತರಿಗೆ ಹಾಗೂ ಕೇಂದ್ರ ಮಾರುಕಟ್ಟೆಯ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಉಪ ಆಯುಕ್ತರಿಗೆ (ಸಂಚಾರ) ನಿರ್ದೇಶಿಸಿದರು.

ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಪೋಲೀಸ್ ಆಯುಕ್ತ ಶಶಿಕುಮಾರ್, ಉಪಾಯುಕ್ತ ಹರಿರಾಂ ಶಂಕರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News