ಭಾರತಕ್ಕೆ 100 ಮಿ. ಡಾಲರ್ ಮೌಲ್ಯದ ಸರಕು ರವಾನೆ: ಅಮೆರಿಕ

Update: 2021-04-30 18:19 GMT

ಹೊಸದಿಲ್ಲಿ,ಎ.30: ಕೋವಿಡ್-19 ಎರಡನೆ ಅಲೆಯ ಆಘಾತವನ್ನು ಎದುರಿಸುತ್ತಿರುವ ಭಾರತಕ್ಕೆ ಅಮೆರಿಕವು ನೆರವಿನ ಹಸ್ತವನ್ನು ಚಾಚಿದೆ. ಆಮ್ಲಜಕ ಸಿಲಿಂಡರ್ಗಳು ಸೇರಿದಂತೆ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಅಮೆರಿಕವು ಕಳುಹಿಸಿರುವ ವೈದ್ಯಕೀಯ ನೆರವಿನ ಸಾಮಾಗ್ರಿಗಳ ಮೊದಲ ಸರಕು ಶುಕ್ರವಾರ ಭಾರತವನ್ನು ತಲುಪಿದೆ. ಅಮೆರಿಕವು ಕಳುಹಿಸಿರುವ ಕೋವಿಡ್-19 ನೆರವಿನ ಸಾಮಾಗ್ರಿಗಳಲ್ಲಿ ಕ್ಯಾಲಿಫೋರ್ನಿಯಾ ರಾಜ್ಯವು ದೇಣಿಗೆಯಾಗಿ ನೀಡಿರುವ 440 ಆಕ್ಸಿಜನ್ ಸಿಲಿಂಡರ್ಗಳು ಹಾಗೂ ರೆಗ್ಯುಲೇಟರ್ಗಳು, 9.60 ಲಕ್ಷ ತ್ವರಿತ ತಪಾಸಣಾ ಕಿಟ್ ಗಳು ಮತ್ತು ಯುಎಸ್ಏಯ್ಡಿ ಸಂಸ್ಥೆ ಒದಗಿಸಿರುವ 1 ಲಕ್ಷ ಎನ್95 ಮಾಸ್ಕ್‌ ಗಳು ಒಳಗೊಂಡಿವೆ.
 
ಈ ಸಾಮಾಗ್ರಿಗಳನ್ನು ಹೊತ್ತ ಅಮೆರಿಕದ ಸೂಪರ್ ಗ್ಯಾಲಕ್ಸಿ ಮಿಲಿಟರಿ ಸಾರಿಗೆ ವಿಮಾನವು ಇಂದು ಬೆಳಗ್ಗೆ ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
 
‘‘ಅಮೆರಿಕವು ಕಳುಹಿಸಿರುವ ಕೋವಿಡ್-19 ತುರ್ತು ಪರಿಹಾರ ಸಾಮಾಗ್ರಿಗಳ ಮೊದಲ ಸರಕು ಭಾರತಕ್ಕೆ ಆಗಮಿಸಿದೆ. ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ನಾವಿಬ್ಬರೂ ಜೊತೆಯಾಗಿ ಹೋರಾಡುತ್ತಿದ್ದೇವೆ. 70ಕ್ಕೂ ಅಧಿಕ ವರ್ಷಗಳ ಸಹಕಾರದೊಂದಿಗೆ ಅಮೆರಿಕವು ಭಾರತದ ಜೊತೆಗಿದೆ’’ ಎಂದು ಅಮೆರಿಕದ ರಾಯಭಾರಿ ಕಚೇರಿಯು ಯುಎಸ್ಇಂಡಿಯಾ ದೋಸ್ತಿ ಹ್ಯಾಶ್ ಟ್ಯಾಗ್‌ ನಡಿ ಟ್ವೀಟ್ ಮಾಡಿದೆ.
 
ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಭಾರೀ ಹೆಚ್ಚಳಕ್ಕೆ ಸಾಕ್ಷಿಯಾಗಿರುವ ಭಾರತಕ್ಕೆ ಬೆಂಬಲವಾಗಿ ಕೋವಿಶೀಲ್ಡ್ ಲಸಿಕೆಗಳ ತಯಾರಿಗೆ ಅಗತ್ಯವಿರುವ ಕಚ್ಚಾ ಸಾಮಾಗ್ರಿಗಳು ಮತ್ತು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬೇಕಾದ ವೆಂಟಿಲೇಟರ್ಗಳು ಹಾಗೂ ಆಮ್ಲಜನಕ ಸಿಲಿಂಡರ್ಗಳನ್ನು ಒದಗಿಸುವುದಾಗಿ ಅಮೆರಿಕ ಕಳೆದ ರವಿವಾರ ಘೋಷಿಸಿತ್ತು.

ಅಲ್ಲದೆ ಆಸ್ಟ್ರಾಝೆನೆಕ ಸಂಸ್ಥೆಗೆ ತಾನು ಸಲ್ಲಿಸಿದ್ದ ಲಸಿಕೆಗಳ ಆರ್ಡರ್ ಅನ್ನು ಭಾರತಕ್ಕೆ ವಾಪಸ್ ಮಾಡಿದೆ. ಇದರಿಂದಾಗಿ ಭಾರತಕ್ಕೆ 2 ಕೋಟಿ ಕೋವಿಡ್-19 ಲಸಿಕೆ ಗಳು ಲಭ್ಯವಾಗಲಿವೆ ಎಂದು ಶ್ವೇತಭವನದ ಪ್ರಕಟಣೆಯೊಂದು ತಿಳಿಸಿದೆ.
    
‘‘ಕೊರೋನ ಸಾಂಕ್ರಾಮಿಕದ ಹಾವಳಿಯ ಆರಂಭದಲ್ಲಿ ಭಾರತವು ನಮ್ಮ ನೆರವಿಗೆ ಧಾವಿಸಿದಂತೆ, ಅಮೆರಿಕ ಕೂಡಾ, ಅಗತ್ಯ ಸಮಯದಲ್ಲಿ ಭಾರತಕ್ಕೆ ನೆರವನ್ನು ಒದಗಿಸುವ ನಿಟ್ಟಿನಲ್ಲಿ ತುರ್ತಾಗಿ ಶ್ರಮಿಸುವ ಬದ್ಧತೆಯನ್ನು ಹೊಂದಿದೆ. ಇಂದು ನಾವು ಮಹತ್ವದ ಆಮ್ಲಜನಕದ ಸಲಕಣೆ,ಚಿಕಿತ್ಸಾ ಸಾಮಾಗ್ರಿಗಳು ಮತ್ತು ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಮೊದಲ ಸರಕನ್ನು ಭಾರತಕ್ಕೆ ಪೂರೈಕೆ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಟ್ವೀಟಿಸಿದ್ದಾರೆ.
  
ಅಮೆರಿಕದ ವಿವಿಧ ರಾಜ್ಯ ಸರಕಾರಗಳು, ಖಾಸಗಿ ಕಂಪೆನಿಗಳು, ಸರಕಾರೇತರ ಸಂಘಟನೆಗಳು ಮತ್ತು ದೇಶಾದ್ಯಂತ ಸಾವಿರಾರು ಅಮೆರಿಕನ್ನರು ಕೋವಿಡ್-19 ನಿಂದ ತೀವ್ರವಾಗಿ ಬಾಧಿತರಾದ ಭಾರತದ ಜನರಿಗೆೆ ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ನೆರವಾಗಲು ಆಕ್ಸಿಜನ್ ಸಿಲಿಂಡರ್ ಮತ್ತಿತರ ಅಗತ್ಯ ಸಾಮಾಗ್ರಿಗಳನ್ನು ಭಾರತದ ಆಸ್ಪತ್ರೆಗೆ ಪೂರೈಕೆಗಾಗಿ ಒಂದಾಗಿದ್ದಾರೆಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ಪ್ರೈಸ್ ಗುರುವಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News