ಬಾಹ್ಯಾಕಾಶ ನಿಲ್ದಾಣದ ಮೊದಲ ಮೋಡ್ಯೂಲ್ ಉಡಾಯಿಸಿದ ಚೀನಾ

Update: 2021-04-30 04:44 GMT

ಬೀಜಿಂಗ್ (ಚೀನಾ), ಎ. 29: ಬಾಹ್ಯಾಕಾಶದಲ್ಲಿ ತನ್ನದೇ ಆದ ನಿಲ್ದಾಣವೊಂದನ್ನು ಸ್ಥಾಪಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಬಾಹ್ಯಾಕಾಶ ನಿಲ್ದಾಣದ ಮೊದಲ ಭಾಗವನ್ನು ಚೀನಾ ಗುರುವಾರ ಉಡಾಯಿಸಿದೆ. ಇದು ಬಾಹ್ಯಾಕಾಶದಲ್ಲಿ ತನ್ನ ದೇಶದ ಖಾಯಂ ಉಪಸ್ಥಿತಿಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಚೀನಾ ಸಾಧಿಸಿರುವ ಮಹತ್ವದ ಮೈಲಿಗಲ್ಲಾಗಿದೆ.

ಅಮೆರಿಕ, ರಶ್ಯ ಮತ್ತು ಯುರೋಪ್‌ಗಳ ಬಾಹ್ಯಾಕಾಶ ಪ್ರಾಬಲ್ಯ ಸರಿಗಟ್ಟುವುದಕ್ಕಾಗಿ ಚೀನಾವು ನೂರಾರು ಕೋಟಿ ಡಾಲರ್‌ಗಳನ್ನು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸುರಿಯುತ್ತಿದೆ.

ಜೀವ ರಕ್ಷಕ ಸಲಕರಣೆಗಳು ಮತ್ತು ಗಗನಯಾನಿಗಳಿಗಾಗಿ ವಾಸಿಸುವ ಸ್ಥಳವನ್ನು ಹೊಂದಿರುವ ಟಿಯಾನೆ ಕೋರ್ ಮೋಡ್ಯೂಲ್ (ಚೀನೀ ಭಾಷೆಯಲ್ಲಿ ಸ್ವರ್ಗದ ಅರಮನೆ)ನ್ನು ಚೀನಾದ ಹೈನಾನ್ ಪ್ರಾಂತದಲ್ಲಿರುವ ವೆನ್‌ಚಾಂಗ್‌ನಿಂದ ಲಾಂಗ್ -ಮಾರ್ಚ್ 5ಬಿ ರಾಕೆಟ್ ಮೂಲಕ ಉಡಾಯಿಸಲಾಯಿತು. ಇದನ್ನು ಚೀನಾದ ಸರಕಾರಿ ಟೆಲಿವಿಶನ್ ತೋರಿಸಿದೆ.

ಇನ್ನೂ ಹಲವು ಮೋಡ್ಯೂಲ್‌ಗಳನ್ನು ಸಾಗಿಸಲು ಹಾಗೂ ಅವುಗಳನ್ನು ಜೋಡಿಸಲು ಸುಮಾರು 11 ಬಾಹ್ಯಾಕಾಶ ಉಡಾವಣೆಗಳು ನಡೆದ ಬಳಿಕ, 2022ರಲ್ಲಿ ಬಾಹ್ಯಾಕಾಶ ನಿಲ್ದಾಣವು ಕಾರ್ಯಾರಂಭ ಮಾಡುವುದು ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News