ಕುಂದಾಪುರ: ರೆಡ್‌ಕ್ರಾಸ್‌ನಲ್ಲಿ ರಕ್ತಕ್ಕೆ ಕೊರತೆ ಇಲ್ಲ

Update: 2021-04-30 13:43 GMT

ಕುಂದಾಪುರ, ಎ.30: ಕೇಂದ್ರ ಸರ್ಕಾರದ ಆದೇಶದಂತೆ 18 ವರ್ಷ ಮೇಲ್ಪಟ್ಟ ವರಿಗೆ ಕೋವಿಡ್ ಲಸಿಕೆ ಹಾಕುವುದರಿಂದ ಲಸಿಕೆ ಪಡೆದ 28 ದಿನಗಳ ಕಾಲ ರಕ್ತದಾನ ಮಾಡಲು ಅವಕಾಶ ಇಲ್ಲದೆ ಇರುವುದರಿಂದ ಕುಂದಾಪುರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ರಕ್ತಕ್ಕೆ ಕೊರತೆ ಉಂಟಾಗಿದೆ ಎಂದು ಕೆಲವೊಂದು ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ವರದಿಯನ್ನು ಕುಂದಾಪುರದ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ನಿರಾಕರಿಸಿದ್ದಾರೆ.

ಕುಂದಾಪುರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸದ್ಯ ರಕ್ತಕ್ಕೆ ಕೊರತೆ ಇಲ್ಲ. 18 ವರ್ಷ ಮೇಲ್ಪಟ್ಟವರು, ಕೋವಿಡ್ ಲಸಿಕೆ ಪಡೆದವರು 28 ದಿನಗಳ ಬಳಿಕ ರಕ್ತದಾನ ಮಾಡಬಹುದು, ಒಂದು ಲಸಿಕೆ ಪಡೆದ ನಂತರ ಇನ್ನೊಂದು ಲಸಿಕೆ ಪಡೆಯಲು 45 ದಿನಗಳ ಅಂತರ ಬೇಕು. ಅದರ ಮಧ್ಯೆ ಅವರು ರಕ್ತದಾನ ಮಾಡಬಹುದು ಎಂದರು.

ನಾವು ಈ ಮಧ್ಯದಲ್ಲಿ ನಮ್ಮ ಸಂಸ್ಥೆಯಿಂದ ಚಿಕ್ಕ-ಚಿಕ್ಕರಕ್ತದಾನ ಶಿಬಿರಗಳನ್ನು ಮಾಡಿ ಮಾಡಿ ರಕ್ತ ಸಂಗ್ರಹಿಸಿ ಅಗತ್ಯವಿದ್ದವರಿಗೆ ಪೂರೈಕೆ ಮಾಡುತ್ತಿದ್ದೇವೆ. ಇಷ್ಟರ ತನಕ ಇಲ್ಲಿ ರಕ್ತದ ಅಭಾವ ಉಂಟಾಗಿಲ್ಲ ಎಂದವರು ವಾರ್ತಾಭಾರತಿಗೆ ತಿಳಿಸಿದರು.

ಇಂದಿನಿಂದ ಮೇ 4ರವರೆಗೆ ಕುಂದಾಪುರದ ವಿಶ್ವಹಿಂದು ಪರಿಷತ್ ಹಾಗೂ ಕುಂದಾಪುರ ಬಜರಂಗದಳದ ವತಿಯಿಂದ ರಕ್ತದಾನ ಶಿಬಿರ ನಡೆಯಲಿದ್ದು, ಇಲ್ಲಿ ದಿನಕ್ಕೆ 50 ಜನರಂತೆ ರಕ್ತದಾನ ಮಾಡುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ರಕ್ತವನ್ನು ಕಾರ್ಕಳದಿಂದ ಹಿಡಿದು ಮಣಿಪಾಲ, ಉಡುಪಿ,ಬ್ರಹ್ಮಾವರ,ಕುಂದಾಪುರ ಅಲ್ಲದೆ ಭಟ್ಕಳ, ಹೊನ್ನಾವರ, ಕುಮಟಾದವರೆಗೆ ಪೂರೈಕೆ ಮಾಡುತ್ತಿದ್ದೇವೆ ಎಂದರು.

ಆದ್ದರಿಂದ ಕುಂದಾಪುರ ರೆಡ್‌ಕ್ರಾಸ್‌ನಲ್ಲಿ ರಕ್ತ ಪೂರೈಕೆಗೆ ಯಾವುದೇ ಸಮಸ್ಯೆ ಖಂಡಿತ ಇಲ್ಲ. ಮುಂದಿನ ದಿನಗಳಲ್ಲಿಯೂ ಕೂಡ ಇದೇ ರೀತಿ ರಕ್ತವನ್ನು ಪೂರೈಕೆ ಮಾಡುತ್ತೇವೆ ಎಂಬ ಭರವಸೆ ನಮಗಿದೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News