×
Ad

ಉಡುಪಿ: ಕೋವಿಡ್ ಗೆ ಮತ್ತಿಬ್ಬರು ಬಲಿ, 660 ಮಂದಿಗೆ ಕೊರೋನ ಸೋಂಕು

Update: 2021-04-30 20:32 IST

ಉಡುಪಿ, ಎ.30: ಜಿಲ್ಲೆಯಲ್ಲಿ ಕೋವಿಡ್-19ರ ಅಟ್ಟಹಾಸ ತೀವ್ರಗೊಳ್ಳತೊಡಗಿದ್ದು, ಶುಕ್ರವಾರ ಇನ್ನೂ ಇಬ್ಬರು ರೋಗಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 198ಕ್ಕೇರಿದೆ.

ಶುಕ್ರವಾರ ಜಿಲ್ಲೆಯಲ್ಲಿ 660 ಮಂದಿ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಇದರೊಂದಿಗೆ ಒಟ್ಟು 419 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ ಎರೂವರೆ ಸಾವಿರದ ಗಡಿಯನ್ನು ದಾಟಿದೆ.

ಇಂದು ಮೃತಪಟ್ಟವರಿಬ್ಬರೂ ಉಡುಪಿ ತಾಲೂಕಿನವರು. 73 ವರ್ಷ ಪ್ರಾಯದ ಪುರುಷ ಹಾಗೂ 50 ವರ್ಷ ಪ್ರಾಯದ ಮಹಿಳೆಯರಿಬ್ಬರೂ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಇಬ್ಬರಲ್ಲೂ ತೀವ್ರವಾದ ಉಸಿರಾಟದ ತೊಂದರೆ ಹಾಗೂ ಕೆಮ್ಮುವಿನೊಂದಿಗೆ ಹೃದಯ ಕಾಯಿಲೆ, ನ್ಯೂಮೋನಿಯಾ ಸೇರಿದಂತೆ ಇತರ ಕಾಯಿಲೆಗಳಿದ್ದವು. ಕೋವಿಡ್‌ನ ಗಂಭೀರ ಲಕ್ಷಣವಿದ್ದ 73 ವರ್ಷದ ವೃದ್ಧ ಎ.28ರಂದು ಆಸ್ಪತ್ರೆಗೆ ದಾಖಲಾಗಿ ಎ.28ರಂದು ಮೃತಪಟ್ಟರೆ, 50ರ ಹರೆಯದ ಮಹಿಳೆ ಎ. 26ರಂದು ಚಿಕಿತ್ಸೆಗೆ ದಾಖಲಾಗಿ ಎ. 29ರಂದು ಸಾವನ್ನಪ್ಪಿದ್ದರು.

ಇಂದು ಪಾಸಿಟಿವ್ ಬಂದ 660 ಮಂದಿಯಲ್ಲಿ 371ಮಂದಿ ಪುರುಷರಾದರೆ, 289 ಮಂದಿ ಮಹಿಳೆಯರು. ಇವರಲ್ಲಿ 346 ಮಂದಿ ಉಡುಪಿ ತಾಲೂಕಿ ನವರು. ಉಳಿದಂತೆ 217 ಮಂದಿ ಕುಂದಾಪುರ ಹಾಗೂ 93 ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಗಳಿಂದ ವಿವಿಧ ಕಾರಣಗಳಿಗಾಗಿ ಆಗಮಿಸಿದ ನಾಲ್ವರು ಸಹ ಇಂದು ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರಾದವರ ಪ್ರಾಥಮಿಕ ಸಂಪರ್ಕಿತರು ಹೆಚ್ಚೆಚ್ಚು ಮಂದಿ ಪಾಸಿಟಿವ್ ಬರುತ್ತಿರುವುದು ಗಣನೀಯ ಅಂಶ ಎಂದು ಡಾ. ಸೂಡ ತಿಳಿಸಿದರು. ಇಂದು ಉಡುಪಿಯಲ್ಲಿ 212, ಕುಂದಾಪುರದಲ್ಲಿ 132 ಹಾಗೂ ಕಾರ್ಕಳದಲ್ಲಿ 67 ಮಂದಿ ಪ್ರಾಥಮಿಕ ಸಂಪರ್ಕಿತರೇ ಪಾಸಿಟಿವ್ ಬಂದಿದ್ದಾರೆ. ಅದೇ ರೀತಿ ಉಡುಪಿಯಲ್ಲಿ 75, ಕಾರ್ಕಳದಲ್ಲಿ 39 ಹಾಗೂ ಕಾರ್ಕಳದ 11 ಮಂದಿ ಐಎಲ್‌ಐ ರೋಗಿಗಳಿದ್ದಾರೆ ಎಂದರು.

ಗುರುವಾರ 419 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 28,748 ಕ್ಕೇರಿದೆ. ನಿನ್ನೆ ಜಿಲ್ಲೆಯ 2763 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 660 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 31,542 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,04,114 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News