×
Ad

ಉಡುಪಿ : ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿದ ಆರೋಪ; 99 ವಾಹನಗಳ ವಿರುದ್ಧ ಪ್ರಕರಣ ದಾಖಲು

Update: 2021-04-30 20:58 IST
ಸಾಂದರ್ಭಿಕ ಚಿತ್ರ

 ಉಡುಪಿ, ಎ.30: ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕಾಗಿ ಹೇರಿರುವ ಕರ್ಫ್ಯೂ ಮೂರನೇ ದಿನವಾದ ಶುಕ್ರವಾರ, ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾದರೂ, ಜನ ಬೆಳಗ್ಗೆ 10 ಗಂಟೆಯ ಬಳಿಕವೂ ನಿರಾಳವಾಗಿ ತಮ್ಮ ವ್ಯವಹಾರಗಳಿಗಾಗಿ ಓಡಾಡುತಿದ್ದುದು ಕಂಡುಬಂತು. ಇದಕ್ಕೆ ಇಂದು ತಿಂಗಳ ಕೊನೆಯ ದಿನವಾಗಿರುವುದೂ, ಇನ್ನೆರಡು ದಿನ ರಜೆ ಇುವುದು ಕಾರಣವಾಗಿತ್ತೆನ್ನಬಹುದು.

ಉಡುಪಿ ಸೇರಿದಂತೆ ಜಿಲ್ಲೆಯಾದ್ಯಂತ ಖಾಸಗಿ, ಸರಕಾರಿ ಬಸ್ ಸೇವೆ ಇಂದು ಸಹ ಸಂಪೂರ್ಣ ಸ್ತಬ್ಧವಾಗಿತ್ತು. ಬಸ್ ನಿಲ್ದಾಣಗಳು ಬಿಕೋ ಎನ್ನುತಿದ್ದವು. 10 ಗಂಟೆಗೆ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚಿದರೂ ಬ್ಯಾಂಕ್ ಮತ್ತಿತರ ವ್ಯವಹಾರಗಳಿಗಾಗಿ ಜನರ ಓಡಾಟದ 11-11:30ರವರೆಗೆ ಮುಂದುವರಿದಿತ್ತು. ಈ ವೇಳೆ ಪೊಲೀಸರು ಜನರ ಓಡಾಟಕ್ಕೆ ಹೆಚ್ಚಿನ ಅಡ್ಡಿ-ಅತಂಕ ಉಂಟು ಮಾಡಲಿಲ್ಲ. ಆ ಬಳಿಕವಷ್ಟೇ ಅವರು ಬಿಗುವಿನ ಕ್ರಮ ಕೈಗೊಂಡರು.

ಮೆಡಿಕಲ್ ಸ್ಟೋರ್ಸ್‌, ಪೆಟ್ರೋಲ್ ಬಂಕ್, ಹೋಟೆಲ್ ಸಹಿತ ಅಗತ್ಯ ವಸ್ತು ಗಳ ಅಂಗಡಿ-ಮುಂಗಟ್ಟುಗಳು ತೆರೆದುಕೊಂಡಿದ್ದರೂ ಜನರ ಓಡಾಟ ವಿರಳವಾಗಿರುವ ಹಿನ್ನೆಲೆಯಲ್ಲಿ ಅವರೂ ನಿಗದಿತ ಅವಧಿಗೆ ಮೊದಲೇ ಬಾಗಿಲು ಹಾಕುತ್ತಿದ್ದಾರೆ. ಎಲ್ಲರಿಗೂ ಗ್ರಾಹಕರನ್ನು ಎದುರು ನೋಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಗ್ಗೆ 6ರಿಂದ 10ರ ಅವಧಿಯಲ್ಲಿ ದಿನಸಿ ಅಂಗಡಿ-ತರಕಾರಿ, ಹಣ್ಣು ಹಂಪಲುಗಳ ಅಂಗಡಿಗಳಿಗೆ ಜನ ಮುತ್ತಿಗೆ ಹಾಕುತಿದ್ದಾರೆ. ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಒಂದು ದಿನದಲ್ಲಿ ನಡೆಯುವ ವ್ಯಾಪಾರ ಈಗ ನಾಲ್ಕೈದು ಗಂಟೆಗಳಲ್ಲಿ ನಡೆದುಹೋಗುತ್ತಿವೆ. ಬ್ಯೂಟಿ ಪಾರ್ಲರ್, ಸೆಲೂನ್‌ಗಳು ಕೂಡಾ ಬಾಗಿಲು ಹಾಕಿವೆ. ವ್ಯಾಪಾರವಿಲ್ಲದೇ ಹೆಚ್ಚಿನ ಹೋಟೆಲ್‌ಗಳು ಅವಕಾಶವಿದ್ದರೂ ಪಾರ್ಸೆಲ್ ಕೊಡುವುದಕ್ಕೂ ಆಸಕ್ತಿ ತೋರುತ್ತಿಲ್ಲ.

14 ದಿನಗಳ ಕರ್ಫ್ಯೂ ಗೆ ಅಂಜಿದ ಮಲ್ಪೆ ಬಂದರಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹುಟ್ಟೂರಿಗೆ ತೆರಳಿರುವ ಪರಿಣಾಮ ಮಲ್ಪೆ ಬಂದರಿನಲ್ಲೂ ವ್ಯಾಪಾರ-ವಹಿವಾಟು ತಗ್ಗಿದೆ. ಕೂಲಿ ಕಾರ್ಮಿಕರಿಲ್ಲದೇ ಹೆಚ್ಚಿನ ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ. ಮೀನುಗಾರಿಕೆಯನ್ನು ನಂಬಿಕೊಂಡಿರುವ ಐಸ್‌ ಪ್ಲಾಂಟ್ ವ್ಯವಹಾರವೂ ಕುಸಿದಿದೆ.

99 ವಾಹನ ಮುಟ್ಚುಗೋಲು: ಪೊಲೀಸರು, ಆರೋಗ್ಯ ಕಾರ್ಯಕರ್ತರು, ವೈದ್ಯರು ಸೇರಿದಂತೆ ಎಲ್ಲಾ ಕೋವಿಡ್ ಮುಂಚೂಣಿ ಕಾರ್ಯಕರ್ತರು ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ರಾಜ್ಯ, ರಾಷ್ಟ್ರ ಹೆದ್ದಾರಿ ಸಹಿತ ಸಿಟಿ ಸುತ್ತುಮುತ್ತ ಪೊಲೀಸರು ನಿಗಾ ಇಟ್ಟಿದ್ದಾರೆ. ಗಡಿ ಭಾಗ ಸೇರಿದಂತೆ 21 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ತಪಾಸಣೆ ನಡೆಸಲಾಗುತ್ತಿದೆ. ತೀವ್ರ ತಪಾಸಣೆ ನಡೆಸಿ ವಾಹನಗಳನ್ನು ಬಿಡಲಾಗುತ್ತಿದೆ.

ಇಂದು ನಿಯಮ ಉಲ್ಲಂಘಿಸಿ ಓಡಾಟ ನಡೆಸುತಿದ್ದ ಒಟ್ಟು 99 ವಾಹನಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಇವುಗಳಲ್ಲಿ 86 ದ್ವಿಚಕ್ರ ವಾಹನ ಹಾಗೂ 13 ಕಾರುಗಳು ಸೇರಿವೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ರಕ್ತದಾನ ಶಿಬಿರ: ಕೋವಿಡ್-19 ಕಾರಣಕ್ಕೆ ಮುಂದೆ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಆಗದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ. ಕುಂದಾಪುರದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳಗಳು ಜಂಟಿಯಾಗಿ ಸತತ ಐದು ದಿನಗಳ ರಕ್ತದಾನ ಶಿಬಿರವನ್ನು ಇಂದಿನಿಂದ ಆಯೋಜಿಸಿವೆ.

ರಕ್ತದಾನ ಶಿಬಿರಕ್ಕೆ ಆಗಮಿಸುವವರ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕೆ ಪಾಸ್ ನೀಡಲಾಗುತ್ತಿದೆ. ಬಡವರಿಗೆ, ನಿರ್ಗತಿಕರಿಗೆ, ಅನಾಥರಿಗೆ ಅಲ್ಲಲ್ಲಿ ದಾನಿಗಳ ನೆರವಿನೊಂದಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News