×
Ad

ಸಮಸ್ತ ಮದ್ರಸ ಪಬ್ಲಿಕ್ ಪರೀಕ್ಷೆ: ದ.ಕ. ಜಿಲ್ಲೆಗೆ ಶೇ 96.08 ಫಲಿತಾಂಶ

Update: 2021-04-30 21:48 IST

ಮಂಗಳೂರು, ಎ.30: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಎಪ್ರಿಲ್ ಮೊದಲ ವಾರ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.

 ಐದು, ಏಳು, ಹತ್ತು, ಪ್ಲಸ್ ಟು ತರಗತಿಗಳಲ್ಲಿ ಭಾಗವಹಿಸಿದ 2,54,205 ವಿದ್ಯಾರ್ಥಿಗಳಲ್ಲಿ 2,44,228 ಮಂದಿ ತೇರ್ಗಡೆ ಹೊಂದಿದ್ದು, ಶೇ.96.08 ಫಲಿತಾಂಶ ದಾಖಲಾಗಿದೆ. ಇದರಲ್ಲಿ 506 ವಿದ್ಯಾರ್ಥಿಗಳು ಟಾಪ್‌ಪ್ಲಸ್, 18,212 ಮಂದಿ ಡಿಸ್ಟಿಂಕ್ಷನ್, 42,543 ಫಸ್ಟ್ ಕ್ಲಾಸ್, 28,145 ಸೆಕೆಂಡ್ ಕ್ಲಾಸ್, 1,54,822 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕೇರಳ, ಕರ್ನಾಟಕ, ಪಾಂಡಿಚೇರಿ, ತಮಿಳುನಾಡು, ಅಂಡಮಾನ್, ಲಕ್ಷದೀಪ, ಯುಎಇ, ಕತರ್, ಸೌದಿ ಅರೇಬಿಯಾ, ಬಹರೈನ್ , ಒಮನ್, ಕುವೈತ್ ಸಹಿತ 7,224 ಕೇಂದ್ರಗಳಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ 10,287 ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ದ.ಕ.ಜಿಲ್ಲೆಯ 397 ಕೇಂದ್ರಗಳಲ್ಲಿ 7,753 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಐದನೇ ತರಗತಿಯ 3,715 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 3,499 ವಿದ್ಯಾರ್ಥಿಗಳು ಮತ್ತು ಏಳನೇ ತರಗತಿಯ 3,301 ವಿದ್ಯಾರ್ಥಿಗಳ ಪೈಕಿ 3070, ಹತ್ತನೇ ತರಗತಿಯ 866 ವಿದ್ಯಾರ್ಥಿಗಳ ಪೈಕಿ 797, ಪ್ಲಸ್ ಟು ತರಗತಿಯ 73 ವಿದ್ಯಾರ್ಥಿಗಳ ಪೈಕಿ 68 ವಿದ್ಯಾರ್ಥಿಗಳು ವಿವಿಧ ಶ್ರೇಣಿಗಳಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 5ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಪ್ಲಸ್ ಟು ತರಗತಿಯ ಓರ್ವ ವಿದ್ಯಾರ್ಥಿ ಟಾಪ್ ಪ್ಲಸ್ ಗಳಿಸಿದ್ದಾರೆ.

‘ಸೇ’ ಪರೀಕ್ಷೆ: ಒಂದು ವಿಷಯದಲ್ಲಿ ಮಾತ್ರ ಅನುತ್ತೀರ್ಣರಾದವರಿಗೆ ಮೇ30ರಂದು ಬೆಳಗ್ಗೆ 10 ಗಂಟೆಗೆ ಆಯಾ ಡಿವಿಷನ್ ಕೇಂದ್ರಗಳಲ್ಲಿ ‘ಸಪ್ಲಿಮೆಂಟರಿ ‘ಸೇ’ (ಒಂದು ವರ್ಷ ಉಳಿತಾಯ) ಪರೀಕ್ಷೆಯಲ್ಲಿ ಭಾಗವಹಿಸಬಹುದು. (www.samstha.info) ನಲ್ಲಿ ಮೇ 3ರಿಂದ 19ರೊಳಗೆ 170ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.

ಮರುಮೌಲ್ಯಮಾಪನ: ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅವಕಾಶವಿದ್ದು ಪ್ರತಿ ವಿಷಯವೊಂದಕ್ಕೆ 100ರೂ.ಶುಲ್ಕ ಪಾವತಿಸಿ ವೆಬ್‌ಸೈಟ್ ಅಥವಾ ಮದ್ರಸ ಲಾಗಿನ್ ಮಾಡಿ ಮೇ 3ರಿಂದ 19ರೊಳಗೆ ಅರ್ಜಿ ಸಲ್ಲಿಸಬೇಕು.

ಸ್ಪೆಷಲ್ ಪರೀಕ್ಷೆ: ಕೋವಿಡ್-19 ಹಿನ್ನೆಲೆಯಲ್ಲಿ ಈ ಹಿಂದೆ ನಡೆದ ಪಬ್ಲಿಕ್ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮೇ 29, 30ರಂದು ಆಯಾ ಡಿವಿಷನ್ ಕೇಂದ್ರಗಳಲ್ಲಿ ಸ್ಪೆಷಲ್ ಪರೀಕ್ಷೆ ನಡೆಸಲಾಗುವುದು. ಅಂತಹ ವಿದ್ಯಾರ್ಥಿಗಳು ಕಲಿಯುವ ಮದ್ರಸಗಳ ಸಂಬಂಧ ಪಟ್ಟವರು ಪುರಾವೆ ಸಹಿತ ಮೇ 3ರಿಂದ 19ರೊಳಗೆ 170 ರೂ. ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.

ಫಲಿತಾಂಶ ಮತ್ತು ಮಾಹಿತಿಗಳು (www.samstha.info)ದಲ್ಲಿ ಲಭ್ಯವಿದೆ. ಮಾಹಿತಿಗಾಗಿ 9658600900 ವಾಟ್ಸ್‌ಆ್ಯಪ್ ಮಾಡಬಹುದು. ಅಲ್ಲದೆ ಆಯಾ ವಿಭಾಗಿಯ ಪರೀಕ್ಷಾ ವರಿಷ್ಠರನ್ನು ಸಂಪರ್ಕಿಸಬಹುದು ಎಂದು ಮುಫತ್ತಿಸ್ ಉಮರ್ ದಾರಿಮಿ ಸಾಲ್ಮರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News