×
Ad

ಸಂಸದರ ವಾರ್‌ರೂಮ್; ಉಚಿತ ಮೆಡಿಸಿನ್‌ಗೆ ಬೇಡಿಕೆ ಸಲ್ಲಿಸುತ್ತಿರುವ ಸಾರ್ವಜನಿಕರು

Update: 2021-04-30 22:14 IST

ಮಂಗಳೂರು, ಎ.30: ಕೋವಿಡ್-19ಗೆ ಸಂಬಂಧಿಸಿ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾರದ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಸಂಸದ ನಳಿನ್ ಕುಮಾರ್ ಕಟೀಲ್‌ರ ‘ವಾರ್‌ರೂಮ್‌‘ಗೆ ದಿನನಿತ್ಯ ಆಕ್ಸಿಜನ್ ಬೇಕಿತ್ತು, ಆ್ಯಂಬುಲೆನ್ಸ್ ಬೇಕಿತ್ತು, ರೆಮ್‌ಡೆಸಿವಿರ್ ಸಿಗಬಹುದಾ? ಲಸಿಕೆ ಬೇಕಿತ್ತು... ಇತ್ಯಾದಿ ನೂರಾರು ಕರೆಗಳು ಬರುತ್ತಿವೆ. ಈ ಮಧ್ಯೆ ಕೆಲವರು ಉಚಿತ ಮೆಡಿಸಿನ್‌ಗೂ ಬೇಡಿಕೆ ಸಲ್ಲಿಸುತ್ತಿದ್ದಾರೆ.

ಸಂಸದರ ವಾರ್‌ರೂಮ್‌ನಲ್ಲಿರುವ ಮೆಡಿಸಿನ್ ವಿಭಾಗದ ಜವಾಬ್ದಾರಿಯನ್ನು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಎ.ಕೆ.ಜಮಾಲ್‌ಗೆ ಸಂಸದರು ವಹಿಸಿಕೊಟ್ಟಿದ್ದಾರೆ. ಕಳೆದ ಬಾರಿಯ ಕೊರೋನ-ಲಾಕ್‌ಡೌನ್ ಸಂದರ್ಭವೂ ಅವರಿಗೇ ಈ ಜವಾಬ್ದಾರಿ ವಹಿಸಿಕೊಡಲಾಗಿತ್ತು.

ವಾರ್‌ರೂಮ್ ಸೇವಾವಧಿಯ ಸಂದರ್ಭ ತನಗಾದ ಅನುಭವವನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡ ಎ.ಕೆ.ಜಮಾಲ್, ಕಳೆದ ಬಾರಿ ಮೆಡಿಸಿನ್ ವಿಭಾಗಕ್ಕೆ 2,882 ಕರೆ ಬಂದಿತ್ತು. ಈ ಬಾರಿ ಈವರೆಗೆ 143 ಕರೆಗಳು ಬಂದಿವೆ. ಎಲ್ಲಾ ಕರೆಗಳೂ ಮೆಡಿಸಿನ್‌ಗೆ ಸಂಬಂಧಪಟ್ಟು ಮಾತ್ರ ಬಂದದ್ದಲ್ಲ. ಕೆಲವು ಕರೆಗಳಲ್ಲಿ ದುಸ್ತರ ಬದುಕಿನ ಕಥೆಗಳೂ ಇತ್ತು.

ಜಿಲ್ಲೆಯ 8 ವಿಧಾನ ಸಭೆ ಕ್ಷೇತ್ರಗಳಲ್ಲಿ ನಮ್ಮ ಮೊಬೈಲ್ ಬೈಕ್ ಇದೆ. ಬಂದ ಕರೆಗಳಿಗೆ ತಕ್ಷಣ ಸ್ಪಂದಿಸುತ್ತೇವೆ. ಕೆಲವರು ಸಂಸದರ ವಾರ್‌ರೂಮ್ ಸೇವೆಯು ಉಚಿತ ಎಂದು ಭಾವಿಸಿದ್ದಾರೆ. ಆದರೆ, ಈ ವಾರ್‌ರೂಮ್ ಮೂಲಕ ಪೂರೈಕೆಯಾಗುವ ಮೆಡಿಸಿನ್‌ಗೆ ಮೊತ್ತ ಪಾವತಿಸಬೇಕಾಗುತ್ತದೆ. ಹಳೆಯಂಗಡಿಯ ವ್ಯಕ್ತಿಯೊಬ್ಬರು ಕರೆ ಮಾಡಿ ಮೆಡಿಸಿನ್‌ನ ಹೆಸರು ಹೇಳಿದರು. ಅದರ ಮೊತ್ತ ಕೇವಲ 13 ರೂ. ಮಾತ್ರ. ಮಂಗಳೂರಿನಿಂದ ಹಳೆಯಂಗಡಿಗೆ ತೆರಳಿ ಆ ಮೆಡಿಸಿನ್ ಕೊಟ್ಟು ಬಂದೆವು. ಇಲ್ಲಿ ಲಾಭದ ಪ್ರಶ್ನೆ ಅಲ್ಲ, ಸೇವಾತೃಪ್ತಿ ಮುಖ್ಯ ಎಂದು ಭಾವಿಸಿ ನಮ್ಮ ತಂಡ ಕೆಲಸ ಮಾಡುತ್ತದೆ ಎಂದು ಜಮಾಲ್ ಹೇಳಿದರು.

ಈ ಮಧ್ಯೆ ಗಂಜಿಮಠದ ಮಹಿಳೆಯೊಬ್ಬರು ಕರೆ ಮಾಡಿ 1 ತಿಂಗಳ ಮೆಡಿಸಿನ್, ಬಳಿಕ 3 ತಿಂಗಳದ್ದು ಕಳಿಸಿ ಎಂದರು. ಕೊನೆಗೆ 6 ತಿಂಗಳದ್ದು ಬೇಕು ಎಂದರು. ಸುಮಾರು 7,300 ರೂ. ಮೊತ್ತದ ಮೆಡಿಸಿನ್ ಮನೆ ಬಾಗಿಲಿಗೆ ತಲುಪಿಸಿದರೂ ಆ ಮಹಿಳೆ ಹಣ ಕೊಡಲು ನಿರಾಕರಿಸಿದರು. ನಾವು ಉಚಿತ ಎಂದು ಭಾವಿಸಿದ್ದೆವು ಎಂದು ಅವರು ತಿಳಿಸಿರುವುದಾಗಿ ಜಮಾಲ್ ನುಡಿದರು.

ತುಂಬೆಯ ಮಹಿಳೆಯೊಬ್ಬರು ಹಾಲು ಮುಗಿದಿದೆ. ಹೊರಗೆ ಹೋಗಿ ತರಲು ಯಾರೂ ಇಲ್ಲ. ಮಗು ಹಾಲಿಗಾಗಿ ಅಳುತ್ತಿದೆ ಎಂದರು. ನಾವು ಆ ವ್ಯವಸ್ಥೆಯನ್ನೂ ಮಾಡಿದೆವು. ಇನ್ನೊಬ್ಬರು ಕರೆ ಮಾಡಿ ಮನೆಯಲ್ಲಿ ಅಕ್ಕಿ ಸಾಮಗ್ರಿ ಇಲ್ಲ ಎಂದರೆ, ಮೂರು ಮಂದಿ ಕರೆ ಮಾಡಿ ಅಡುಗೆ ಅನಿಲ ಮುಗಿದಿದೆ. ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದರು. ನಾವು ಅದಕ್ಕೂ ಸ್ಪಂದಿಸಿದೆವು. ಮತ್ತೊಬ್ಬರು ಕರೆ ಮಾಡಿ ರೇಶನ್ ತರಲು 3 ಸಾವಿರ ರೂ. ಬೇಕು ಎಂದರು. ನಾವು ಹಣದ ಬದಲು ರೇಶನ್ ಕಿಟ್ ನೀಡಿ ಬಂದೆವು ಎಂದು ಜಮಾಲ್ ಹೇಳಿದರು.

ಎ.26ರಂದು ಫಳ್ನೀರ್‌ನ ಫ್ಲಾಟ್‌ವೊಂದರ 43 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಕೋವಿಡ್ ಭಯದಿಂದ ಅವರ ತಾಯಿ ಕೂಡ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ನಮ್ಮ ತಂಡವು ಅತ್ತಾವರ ನಂದಿಗುಡ್ಡೆಯ ಸ್ಮಶಾನ ಭೂಮಿಯಲ್ಲಿ ಆ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನೆರವು ನೀಡಿದೆ ಎಂದು ಜಮಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News