ತಾಯಿ ಮೃತಪಟ್ಟ ಕಾರಣ 2 ದಿನ ಹಸಿವಿನಿಂದಿದ್ದ ಪುಟ್ಟ ಮಗು: ಕೋವಿಡ್‌ ಗೆ ಹೆದರಿ ಹತ್ತಿರ ಸುಳಿಯದ ಜನ !

Update: 2021-04-30 16:46 GMT

ಪುಣೆ: ತಾಯಿ ಮೃತಪಟ್ಟು ಎರಡು ದಿನಗಳಾಗಿದ್ದು, ಮೃತದೇಹದ ಸಮೀಪದಲ್ಲೇ ಒಂದೂವರೆ ವರ್ಷದ ಮಗುವೊಂದು ಎರಡು ದಿನಗಳ ಕಾಲ ಹಸಿವಿನಿಂದಿದ್ದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ತಾಯಿ ಕೋವಿಡ್‌ ನಿಂದ ಮೃತಪಟ್ಟಿರಬಹುದೆಂಬ ಶಂಕೆಯಿಂದ ಯಾರೂ ಮಗುವಿಗೆ ಆಹರ ನೀಡಲು ಮುಂದಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಮನೆಯ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪುಟ್ಟ ಮಗುವೊಂದು ಮೃತದೇಹದ ಬಳಿಯಿದ್ದದ್ದನ್ನು ಗಮನಿಸಿದರು. ಕೂಡಲೇ ಮಹಿಳಾ ಕಾನ್‌ ಸ್ಟೇಬಲ್‌ ಗಳಾದ ಸುಶೀಲಾ ಗಭಾಲೆ ಹಾಗೂ ರೇಖಾ ವಾಝೆ ಮಗುವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡು ಆಹಾರ ನೀಡಿದರು ಎಂದು ತಿಳಿದು ಬಂದಿದೆ.

"ನನಗೆ ಆರು ಮತ್ತು ಎಂಟರ ಹರೆಯದ ಇಬ್ಬರು ಮಕ್ಕಳಿದ್ದಾರೆ. ಈ ಮಗುವನ್ನು ನೋಡಿದಾಗ ನನ್ನ ಮಗುವಿನಂತೆಯೇ ಭಾಸವಾಯಿತು. ಹಾಲು ನೀಡಿದಾಗ ಹಸಿವಿನಿಂದ ಮಗು ಬೇಗನೇ ಕುಡಿಯಿತು. ಮಗುವಿಗೆ ಸ್ವಲ್ಪ ಜ್ವರವಿತ್ತು. ಆಸ್ಪತ್ರೆಗೆ ತೋರಿಸಿದಾಗ ಸರಿಯಾದ ಆಹಾರ ಮತ್ತು ಆರೈಕೆ ಮಾಡಿದರೆ ಸರಿಯಾಗುತ್ತದೆ ಎಂದು ವೈದ್ಯರು ಹೇಳಿದರು. ಕೋವಿಡ್‌ ಟೆಸ್ಟ್‌ ನಡೆಸಿದಾಗ ನೆಗೆಟಿವ್‌ ರಿಪೋರ್ಟ್‌ ಬಂದಿದೆ" ಎಂದು ಮಹಿಳಾ ಕಾನ್‌ ಸ್ಟೇಬಲ್‌ ಸುಶೀಲಾ ಹೇಳಿದ್ದಾರೆ.

"ತಾಯಿಗೆ ಕೊರೋನ ಸೋಂಕಿತ್ತೇ ಎನ್ನುವುದು ಇನ್ನು ತಿಳಿದು ಬರಬೇಕಾಗಿದೆ. ಮಗುವಿನ ತಂದೆಯು ಉತ್ತರಪ್ರದೇಶಕ್ಕೆ ಕೆಲಸಕ್ಕೆಂದು ತೆರಳಿದ್ದು. ಅವರು ಹಿಂದಿರುಗಿ ಬರಲು ಕಾಯುತ್ತಿದ್ದೇವೆ" ಎಂದು ಪೊಲೀಸ್‌ ಇನ್‌ ಸ್ಪೆಕ್ಟರ್‌ ಪ್ರಕಾಶ್‌ ಜಾಧವ್‌ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News