×
Ad

ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ವೀಡಿಯೊ ವೈರಲ್ : ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

Update: 2021-05-01 18:28 IST

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅವರು ಅಧ್ಯಕ್ಷರಾಗುವ ಮುನ್ನ ಅಂದರೆ ಸುಮಾರು ಎರಡು ವರ್ಷದ ಹಿಂದೆ ಜಿಲ್ಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರ ನಿರೂಪಣೆ ಮಾಡುವಾಗ ಆಡಿದ ಮಾತಿನ ವೀಡಿಯೊ ಇದೀಗ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗುತ್ತಿದೆ.

ದಯಾನಂದ ಕತ್ತಲ್‌ಸಾರ್ ಮುಸ್ಲಿಮರನ್ನು ‘ಕಂದೊಡಿ’ ಜಾತಿಯ ಹಾವಿಗೆ ಹೋಲಿಸಿದ್ದಾರೆ. ಮುಸ್ಲಿಮರು ಗೋಹತ್ಯೆ ಮಾಡುವವರು, ಲವ್‌ ಜಿಹಾದ್ ಮಾಡುವವರು, ಅತ್ಯಾಚಾರ ಎಸಗುವವರು ಎಂಬಂತೆ ಕತ್ತಲ್‌ಸಾರ್ ವ್ಯಾಖ್ಯಾನಿಸಿದ್ದಾರೆ. ಅಲ್ಲದೆ ಡಬ್ಬ ಬಡಿಯುವ ಈ ಪಾಪಿಗಳಿಗೆ ಉತ್ತರಿಸಲು ‘ನಮೋ’ ಮಂತ್ರೋಚ್ಛಾರ ಮಾಡಬೇಕು. ಆವಾಗಲೇ ರಾಮರಾಜ್ಯ ನಿರ್ಮಾಣವಾಗಲಿದೆ. ಅಯೋಧ್ಯೆಯಲ್ಲಿ ರಾಮಮಂದಿರವೂ ನಿರ್ಮಾಣವಾಗಲಿದೆ ಅಂತ ಹೇಳಿ ಮುಸ್ಲಿಮರನ್ನು ಅವಹೇಳನಗೈದಿದ್ದರು ಎಂಬ ಸಂದೇಶ ಹರಿದಾಡುತ್ತಿದೆ. ಈ ಸಂದೇಶಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಟಿಪ್ಪಣಿಯೊಂದಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಿರ್ದಿಷ್ಟ ಸಮುದಾಯವನ್ನು ನಿಂದಿಸಿಲ್ಲ: ಕತ್ತಲ್‌ಸಾರ್ 

ಮುಸ್ಲಿಮರನ್ನು ನಿಂದಿಸಿದ್ದೇನೆ, ಇಸ್ಲಾಮನ್ನು ಅವಹೇಳನಗೈದಿದ್ದೇನೆ ಎಂದೆಲ್ಲಾ ಹೇಳಿ ಕೆಲವರು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಫೋನ್ ಕರೆ ಮಾಡಿ ಬೆದರಿಸುತ್ತಿದ್ದಾರೆ. ಆದರೆ ನಾನು ಯಾವುದೇ ನಿರ್ದಿಷ್ಟ ಸಮುದಾಯವನ್ನು ನಿಂದಿಸಿಲ್ಲ. ಯಾವುದೇ ಸಮುದಾಯವನ್ನು ನಿಂದಿಸಿದ್ದರೆ ಕ್ಷಮೆಯಾಚಿಸಲು ನಾನು ಹಿಂದೇಟು ಹಾಕುವವನೇ ಅಲ್ಲ. ನಾನೊಬ್ಬ ಗೋಪ್ರೇಮಿ. ಹಾಗಂತ ಆಹಾರ ವಿರೋಧಿಯಲ್ಲ. ಆದರೆ ಗೋವುಗಳನ್ನು ಕದ್ದು ಹತ್ಯೆ ಮಾಡಿ ತಿನ್ನುವವರ ವಿರುದ್ಧ ನಾನು ಆಕ್ರೋಶ ಹೊರಹಾಕಿದ್ದೇನೆ. ಅದನ್ನು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಯಾಕೆ ಈಗ ಸೀಮಿತಗೊಳಿಸುತ್ತಾರೆ ಎಂದು ನನಗೆ ಅರ್ಥವಾಗುವುದಿಲ್ಲ. ಕೇರಳದಲ್ಲಿ ಜಾತಿ ಮತ್ತು ಧರ್ಮಾತೀತವಾಗಿ ಗೋಮಾಂಸ ಭಕ್ಷಿಸುತ್ತಾರೆ. ಕಾರ್ಯಕ್ರಮದ ನಿರೂಪನೆ ಸಂದರ್ಭ ನಾನಾಡಿದ ಆ ಮಾತು ಕೇರಳದ ಹಿಂದುಗಳಿಗೂ ಅನ್ವಯವಾಗಲಿದೆ. ಒಟ್ಟಿನಲ್ಲಿ ನನ್ನ ಹಳೆಯ ಆ ವೀಡಿಯೋವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಸಿ ಯಾಕಾಗಿ ತೇಜೋವಧೆ ಮಾಡುತ್ತಾರೋ ಗೊತ್ತಾಗುತ್ತಿಲ್ಲ ಎಂದು ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News